ಅಮೃತವರ್ಷಿಣಿಯ ನೆನಪಿನ ಧಾರೆ

amruthavarshini

ನಾನು ಬೆಳಗಾವಿಯ ಸ್ವಾಧ್ಯಾಯ ವಿದ್ಯಾ ಮಂದಿರದಲ್ಲಿ ಏಳನೆಯ ತರಗತಿಯಲ್ಲಿ ಓದುತ್ತಿದ್ದೆ. ನಮಗೆ ಕುಲಕರ್ಣಿ ಅಂತ ಕುಳ್ಳಗಿನ ಕ್ಲೀನ್ ಶೇವ್  ಮಾಡಿಕೊಂಡಿರುತ್ತಿದ್ದ ಶಿಸ್ತಿನ ಶಿಕ್ಷಕರು ಇಂಗ್ಲೀಷ್ ಹೇಳಿಕೊಡುತ್ತಿದ್ದರು. ಅವರ ಇಂಗ್ಲೀಷ್ ಪಾಠಕ್ಕೆ ಮನಸೋತು ತುಸು ಇಂಗ್ಲೀಷ್ ಕಲಿತುಕೊಂಡಿದ್ದೆ. ಅವರ ಪಾಠದ ನಿರೂಪಣೆ ಹಾಗಿತ್ತು.

ಒಂದು ದಿನ ಕನ್ನಡ ಹೇಳಿಕೊಡುತ್ತಿದ್ದ ಬುಡವಿ ಗುರುಗಳು ಬಂದಿರಲಿಲ್ಲ. ಅವರ ಬದಲಿಗೆ ಕುಲಕರ್ಣಿ ಗುರುಗಳು ಬಂದ್ರು. ನಾವೆಲ್ಲ ಇಂಗ್ಲೀಷ್ ಪಾಠ ಶುರುವಾಗುತ್ತೆ ಅಂತ ಮಾನಸಿಕವಾಗಿ ಸಿದ್ಧರಾದೆವು. ಆದರೆ ಅವರು ಕನ್ನಡದಲ್ಲಿ ಮಾತು ಶುರು ಮಾಡಿದರು; “ಹುಡುಗರೇ, ಹೆದರಬೇಡಿ, ನಾನು ಇಂಗ್ಲೀಷ್ ಪಾಠ ಮಾಡಲ್ಲ. ಯಾಕೆಂದರೆ ಕನ್ನಡ ತರಗತಿಯಲ್ಲಿ ನಾನು ಇಂಗ್ಲೀಷ್ ಹೇಳಿಕೊಟ್ಟರೆ ಅದು ನಿಮ್ಮ ತಲೆಯೊಳಗೆ ಹೋಗುವುದು ಕಷ್ಟ ಸಾಧ್ಯ ಅಲ್ಲ ಅದು ಅಸಾಧ್ಯವಾದುದು ಅಂತ ನನಗೆ ಚೆನ್ನಾಗಿ ಗೊತ್ತು. ಹಾಗಂತ ನಾನು ಕನ್ನಡ ಪಾಠಾನೂ ಮಾಡಲ್ಲ. ಅದು ನನಗೆ ಬರುವುದೂ ಇಲ್ಲ. ಹಾಗಾದರೆ ಏನು ಮಾಡುವುದು? ಸರಿ ಒಂದು ಆಟ ಆಡೋಣ. ಎಲ್ಲರೂ ರೆಡಿನಾ?”

ತರಗತಿಯಲ್ಲಿ ಮೌನ… ಎಲ್ಲರೂ ಸುಮ್ಮನೆ ತಮ್ಮ ತಮ್ಮ ಮುಖ ನೋಡಿಕೊಳ್ಳತೊಡಗಿದರು.

“ಹೆದರಬೆಡ್ರೋ! ನಾನು ನಿಮ್ಮನ್ನೇನೂ ಮಾಡಲ್ಲ! ತುಂಬಾ ಸರಳವಾದ ಆಟ ಇದು. ಕನ್ನಡದಲ್ಲಿ ನಮ್ಮ ಶಬ್ದ ಭಂಡಾರ ಹೆಚ್ಚಿಸಿಕೊಳ್ಳುವ ಆಟ ಆಡೋಣ. ನನಗೂ ಕನ್ನಡ ಜ್ಞಾನ ಹೆಚ್ಚಿಸಿಕೊಳ್ಳಲು ಆಶೆ. ಸರಿ ನಾನು ನಿಮಗೆ  ಆಟದ ಬಗ್ಗೆ ಹೇಳಿದ ಮೇಲೆ ನೀವು ಓಕೆ ಅನ್ನುವಂಗೆ ಕಾಣಿಸುತ್ತದೆ. ನೀವು ನನಗೆ ಸುಂದರವಾದ ಕನ್ನಡ ಶಬ್ದಗಳನ್ನು ಹೇಳಬೇಕು, ಅವು ನನಗೆ ಇಷ್ಟವಾದರೆ ಬೋರ್ಡ್ ಮೇಲೆ ಬರೆಯುವೆ. ಯಾರಿಗಾದ್ರೂ ಅವುಗಳ ಅರ್ಥ ಗೊತ್ತಿದ್ದರೆ ಹೇಳಬಹುದು. ಕೊನೆಗೆ ಅತೀ ಹೆಚ್ಚು ಸುಂದರ ಶಬ್ದಗಳನ್ನು ಹೇಳಿದವರಿಗೆ ನಾನು ಒಂದು ಸುಂದರವಾದ ಬಹುಮಾನವನ್ನು ಕೊಡುವೆನು. ಹೀಗಿದೆ ಆಟ. ಓಕೆನಾ?”

“ಓಕೆ ಸರ್…” ಎಲ್ಲರೂ ದನಿಗೂಡಿಸಿದರು.

ಹೀಗೆ ಒಬ್ಬೊಬ್ಬರೂ ಒಂದೊಂದು ಸುಂದರ ಅನ್ನಿಸಿದ ಪದಗಳನ್ನು ಹೇಳುತ್ತಿದ್ದರು. ಗುರುಗಳಿಗೆ ಇಷ್ಟವಾದರೆ ಬೋರ್ಡ್ ಮೇಲೆ ಬರೆಯುತ್ತಿದ್ದರು. ೩೦ ನಿಮಿಷಗಳಿಗೆ ಎಲ್ಲರ ಶಬ್ದಭಂಡಾರ ಖಾಲಿಯಾಗೋಯ್ತು. ಆಗ ಗುರುಗಳು ಕೆಲವೊಂದು ಸುಳಿವುಗಳನ್ನು ಕೊಡುತ್ತಿದ್ದರು. ಆಗ ನಾವು ಆ ಶಬ್ದವನ್ನು ಗ್ರಹಿಸಿ ಹೇಳುತ್ತಿದ್ದೆವು. ಹೀಗೆ ಸುಳಿವು ನೀಡುತ್ತಿರುವಾಗ ಒಂದು ಸುಳಿವು ಹೀಗಿತ್ತು: “ಇತ್ತೀಚಿಗೆ (೧೯೯೭ ನೇ ಇಸ್ವಿಯಲ್ಲಿ) ಒಂದು ಅದ್ಭುತ ಚಿತ್ರ ಬಂದಿದೆ. ಅದರ ಹೆಸರು ಅತೀ ಸುಂದರ! ಯಾರಾದರೂ ಊಹಿಸಬಲ್ಲಿರಾ?”

ನಾನು ಯೋಚಿಸತೊಡಗಿದೆ…ಇತ್ತೀಚಿಗೆ ಬಿಡುಗಡೆಯಾದ ಚಿತ್ರ ಮತ್ತು ಹೆಸರು ತುಂಬಾ ಸುಂದರವಾಗಿದೆ ಅಂದರೆ ರಮೇಶ್ ಮತ್ತು ಸುಹಾಸಿನಿ ನಟಿಸಿರುವ ಅಮೃತವರ್ಷಿಣಿ ! ಓಹ್! ಎಂತಹ ಸುಂದರ ಶಬ್ದ! ತಕ್ಷಣ ನಾನು

“ಅಮೃತವರ್ಷಿಣಿ” ಅಂತ ಜೋರಾಗಿ ಕೂಗಿದೆ…

ಗುರುಗಳು ನಗುಮೊಗದಿಂದ “ವೆರಿ ಗುಡ್! ನೋಡಿ ಎಂತಹ ಸುಂದರ ಸುಮಧುರ ಹಿತವಾದ ಶಬ್ದ!!! ಯಾರಾದರೂ ಈ ಶಬ್ದದ ಅರ್ಥ ಹೇಳುವಿರಾ?”

ಅವರು ಕೇಳುತ್ತಾರೆ ಅಂತ ಮೊದಲೇ ಗ್ರಹಿಸಿ ಯೋಚಿಸಿ ಮನದಲ್ಲಿ ಹಿಡಿದಿಟ್ಟುಕೊಂಡಿದ್ದೆ. ನಾನು ಕೈ ಎತ್ತಿದೆ..

“ಹಾ ಹೇಳಪ್ಪ ನೀನು..”

ಅಮೃತ  ಅಂದರೆ ದೇವತೆಗಳು ಕುಡಿಯುವ ದ್ರವ. ಅದನ್ನು ಕುಡಿದರೆ ದೇವತೆಗಳು ಸಾಯುವುದಿಲ್ಲ. ಅದು ದೇವತೆಗಳಿಗೆ ಮಾತ್ರ ಮೀಸಲಿರುತ್ತದೆ.  ವರ್ಷ  ಅಂದರೆ ಮಳೆ. ವರ್ಷಿಣಿ  ಅಂದರೆ ಮಳೆಯ ದೇವತೆ. ಅಮೃತವರ್ಷಿಣಿ  ಅಂದರೆ ಅಮೃತದ ಮಳೆಯನ್ನು ಸುರಿಸುವ ದೇವತೆ.”

“ವೆರಿ ನೈಸ್! ವೆರಿ ಗುಡ್! ಎಂತಹ ಸುಂದರ ಅದ್ಭುತ ಅರ್ಥವಲ್ಲವೇ! ಎಲ್ಲರೂ ಬೋರ್ಡ್ ಮೇಲಿನ ಎಲ್ಲ ಶಬ್ದಗಳನ್ನು ಅರ್ಥಸಹಿತ ಬರೆದುಕೊಳ್ಳಿ. ಇಲ್ಲಿಗೆ ಆಟವನ್ನು ಮುಗಿಸೋಣ.”

ಎಲ್ಲರೂ ಬೋರ್ಡ್ ಮೇಲಿನ ಶಬ್ದಗಳನ್ನು ತಮ್ಮ ನೋಟುಬುಕ್ಕಿನಲ್ಲಿ ಬರೆದುಕೊಂಡರು. ಅವತ್ತಿನ ಆ ಸುಂದರ ಶಬ್ದಗಳ ಆಟ ಸಕತ್ ಮಜಾ ಕೊಟ್ಟಿತು. ಆ ವಿಶೇಷವಾದ ಆಟ ಮತ್ತು ಆ ತರಗತಿ ನನ್ನ ಮರೆಯಲಾಗದ ತರಗತಿಯಾಯಿತು. ಆವತ್ತಿನಿಂದ ಅಮೃತವರ್ಷಿಣಿ ಶಬ್ದವು ನನ್ನ ತಲೆಯಲ್ಲಿ ಅಚೊಟ್ಟಿಬಿಟ್ಟಿತು. ಶಬ್ದ ಇಷ್ಟೊಂದು ಸಕ್ಕತಾಗಿದೆ ಇನ್ನು ಚಿತ್ರ ಹೆಂಗಿರಬೇಡ ಅಂತ ಹುಚ್ಚು ಕಲ್ಪನೆಗಳು ಶುರುವಾದವು. ಚಿತ್ರವನ್ನು ನೋಡಲೇಬೇಕು ಅಂತ ಹಠ ಶುರುವಾಯಿತು. ಆದರೆ ಆ ವಯಸ್ಸಿನಲ್ಲಿ (೧೩ ವರ್ಷ ಇರಬಹುದು) ಆ ಚಿತ್ರವನ್ನು ನೋಡಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೆ ನೋಡುವ ಮಹದಾಶೆಯಂತೂ ದುಃಖಿ ಆತ್ಮದ ಹಾಗೆ ನನ್ನಲ್ಲಿ ಉಳಿದುಕೊಂಡಿತು.

ಮುಂದೆ ೪ ವರ್ಷಗಳ ನಂತರ ಒಂದು ದಿನ ಈಟಿವಿ ಯಲ್ಲಿ ಆ ಚಿತ್ರ ಪ್ರಸಾರವಾಗುವುದರ ಬಗ್ಗೆ ಜಾಹೀರಾತು ಬರುತ್ತಿತ್ತು. ಇಂತಹ ಅತ್ತ್ಯುತ್ತಮ ಸದಾವಕಾಶ ಕಳೆದುಕೊಂಡರೆ ನನ್ನಂಥ ಮೂರ್ಖ ಯಾರಿಲ್ಲ ಅಂತ ಅನ್ಕೊಂಡು ಪ್ರಸಾರವಾಗುವ ದಿನಕ್ಕೆ ಬಕಪಕ್ಷಿಯ ಥರ ಕಾಯುತ್ತಿದ್ದೆ.

ಆ ದಿನ ಬಂದೇ ಬಿಟ್ಟಿತು! ಆವತ್ತು ನಾನು ನಮ್ಮೂರಲ್ಲಿದ್ದೆ. ಬೇಸಿಗೆಯಾದ್ದರಿಂದ ಹತ್ತು ಗಂಟೆಗಳ ವಿದ್ಯುತ್ ಲೋಡ್ ಶೆಡ್ಡಿಂಗ್ !!! ಕರೆಂಟೇ ಇಲ್ಲ!!! ತುಂಬಾನೇ ಸಿಟ್ಟು ನಿರಾಶೆ ಹತಾಶೆ ಮೂಡಿ ಆವತ್ತು ಯಾರ ಜೊತೆಗೂ ಮಾತನಾಡದೇ ಮಲಗಿದ್ದೆ.

ಮತ್ತೊಂದು ದಿನ ಅದೇ ಈಟಿವಿ ಯಲ್ಲಿ ಪ್ರಸಾರವಾಗುತ್ತಿತ್ತು. ಕಾಲೇಜಿನಿಂದ ಬಂದಿದ್ದೇ ಬ್ಯಾಗ್ ಮೂಲೆಗೆ ಎಸೆದು ಟಿವಿ ಮುಂದೆ ಕುಳಿತೆ. ಪೂರ್ತೀ ಸಿನೆಮಾ ನೋಡಿಯೇ ಮೇಲೆದ್ದಿದ್ದು. ನಾನು ಯಾವುದೊ ಲೋಕಕ್ಕೆ ಹೋಗಿದ್ದೆ. ಒಂದು ತರಹದ ನಶೆ ಏರಿದಂತಿತ್ತು. ಮತ್ತೆ ನೋಡಬೇಕೆನಿಸಿತು. ಏನು ಮಾಡುವುದು? ಇವಾಗಿನ ಥರ ನಮ್ಮೂರಲ್ಲಿ ಕಂಪ್ಯೂಟರ್ ಇರಲಿಲ್ಲ! ಇಂಟರ್ನೆಟ್ ಇರಲಿಲ್ಲ! ಮೊಬೈಲ್ ಇರಲಿಲ್ಲ! ಎಲ್ಲಿ ನೋಡುವುದು? ಕೆಸೆಟ್ ತರುವಷ್ಟು ದುಡ್ಡೂ ಇರುತ್ತಿರಲಿಲ್ಲ. ಮತ್ತೊಮ್ಮೆ ಪ್ರಸಾರವಾಗುವವರೆಗೂ ಕಾಯಬೇಕಷ್ಟೇ.

ಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲಿ ರೇಡಿಯೋನೇ ಮೊಬೈಲ್, ಐಪಾಡ್ ಮತ್ತು ಮ್ಯೂಸಿಕ್ ಪ್ಲೇಯರ್ ಎಲ್ಲ. ರೇಡಿಯೋದಲ್ಲಿ ಕನ್ನಡ ಎಂದರೆ ಬೆಂಗಳೂರು ಕೇಂದ್ರ, ಧಾರವಾಡ ಕೇಂದ್ರ ಮತ್ತು ಭದ್ರಾವತಿ ಕೇಂದ್ರ ಅಷ್ಟೇ. ಗುಲ್ಬರ್ಗ ಕೇಂದ್ರದ ತರಂಗಗಳು ನಮ್ಮ ಕಡೆ ಅಷ್ಟು ಸರಿಯಾಗಿ ಬರುತ್ತಿರಲಿಲ್ಲ. ಅವುಗಳಲ್ಲಿ ಆಗಾಗ ಕೇಳಿಬರುತ್ತಿದ್ದ ಕನ್ನಡ ಹಾಡುಗಳೆಂದರೆ ಮುತ್ತಿನ ಹಾರ, ಆಕಸ್ಮಿಕ, ನಮ್ಮೂರ ಮಂದಾರ ಹೂವೆ, ಜೀವನದಿ, ಅಮೃತವರ್ಷಿಣಿ, ಅಮೇರಿಕ ಅಮೇರಿಕ ಹೀಗೆ ಅನೇಕ ಸುಮಧುರ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದರು. ಈ ಹಾಡುಗಳು ಶುರುವಾದವೆಂದರೆ ಸಾಕು ನಮಗೆ ಸಂಗೀತದ ಹಬ್ಬವೋ ಹಬ್ಬ! ಅವುಗಳನ್ನು ಕೇಳಿ ಕೇಳಿ ಬಾಯಿಪಾಠವಾಗಿಹೋಗಿದ್ದವು. ಅದರಲ್ಲೂ ಅಮೃತವರ್ಷಿಣಿ ಹಾಡುಗಳು ನನ್ನನ್ನು ಹುಚ್ಚನನ್ನಾಗಿ ಮಾಡಿದ್ದವು. ಭಲೇ ಭಲೇ ಚಂದದ ಚಂದುಳ್ಳಿ ಚಲುವೆ, ತುಂತುರು ಅಲ್ಲೇ ನೀರ ಹಾಡು, ಈ ಸುಂದರ ಬೆಳದಿಂಗಳ, ಮನಸೇ ಬದುಕು.. ಹೀಗೆ ಈ ಹಾಡುಗಳನ್ನು ಕೇಳುತ್ತಿದ್ದರೆ ಹಾಗೆ ನಶೆಯೇರಿಬಿಡುವುದು! ಈಗಲೂ ನನ್ನ ಮೊಬೈಲಿನಲ್ಲಿ ಪ್ರತಿದಿನ ಈ ಹಾಡುಗಳನ್ನು ಕೇಳುತ್ತೇನೆ.

ಮೊನ್ನೆ ಮೊನ್ನೆ ನನ್ನ ಲ್ಯಾಪಟಾಪನಲ್ಲಿ ಏನೋ ಹುಡುಕುವಾಗ ಅಮೃತವರ್ಷಿಣಿ ಸಿಕ್ಕಳು! ಎಲ್ಲ ಕೆಲಸಗಳನ್ನು ಬದಿಗೊತ್ತಿ ಮೊದಲು ಆ ಚಿತ್ರವನ್ನು ನೋಡಿಯೇ ಬಿಟ್ಟೆ! ಒಂದು ಘಳಿಗೆ ಹಳೆಯ ಮಧುರ ನೆನಪುಗಳು ಕಣ್ಣಮುಂದೆ ಬಂದು ರಾಂಪ್ ವಾಕ್ ಮಾಡತೊಡಗಿದವು. ೧೬ ವರ್ಷಗಳ ಹಿಂದೆ ನೋಡಿದ್ದ ಚಿತ್ರ, ಈಗಲೂ ಅದೇ ಕೋತೂಹಲದಿಂದ ನೋಡಿಸಿಕೊಂಡಿತು.

ನೋಡಲು ಕುಳಿತರೆ ಅದೇ ತಾಜಾತನ! ಅದೇ ಅಚ್ಚರಿ! ಅದೇ ಉತ್ಸಾಹ! ಅದೇ ಪ್ರೀತಿ! ಸುಹಾಸಿನಿಯ ಮನಮೋಹಕ ನಗು ಮತ್ತು ಚೇತೋಹಾರಿ ಸಂಭಾಷಣೆ, ಅರವಿಂದ್ ರಮೇಶ್ ಅವರ ಮುಗ್ದ ಅದ್ಭುತ ನಟನೆ, ಶರತ್ ಬಾಬು ಅವರ ಪ್ರಭುದ್ದ ನಟನೆ, ರಾಮಕೃಷ್ಣ ಮತ್ತು ತಾರಾ ಅವರ ತಿಳಿಹಾಸ್ಯದ ಜುಗಲ್ಬಂದಿ, ಬಾಲನಟ (೨೦ ವರ್ಷಗಳ ಹಿಂದೆ) ವಿನಾಯಕ ಜೋಶಿ ಅವರ ಮುದ್ದು ನಟನೆ, ಕೆ ಕಲ್ಯಾಣರ ಹುಚ್ಚು ಹಿಡಿಸುವ ಸಾಹಿತ್ಯ, ದೇವಾ ಅವರ ಸುಮಧುರ ಸಂಗೀತ, ಎಸ್ ಪಿ ಬಾಲಸುಬ್ರಮಣ್ಯ ಮತ್ತು ಚಿತ್ರಾ ಅವರ ಕೋಗಿಲೆಯ ಸುಕೋಮಲ ಕಂಠ, ಪ್ರತೀ ಡೈಲಾಗ್ ಮಧ್ಯೆ ಬರುವ ಕಿಲ್ಲಿಂಗ್ ಸೈಲೆನ್ಸ್, ಗಂಡ ಹೆಂಡತಿಯರ ಮುದ್ದಿನ ಮಾತುಗಳನ್ನು ತಲುಪಿಸುವ ಕೆಂಪು ಟೇಪ್ ರೆಕಾರ್ಡರ್, ಕಥೆಯ ಕ್ಲೈಮಾಕ್ಸ್ ವೈಲ್ಡ್ ಲೈಫ್ ಫೋಟೋಗ್ರಪಿ ಕ್ಯಾಮರಾ, ಆ ಹಸುರಿನ ಬೆಟ್ಟಗಳು, ಆ ಕಾಡಿನ ಮಧ್ಯೆ ಬರುವ ಅಂಕುಡೊಂಕಾದ ಹಾವಿನಂಥ ರಸ್ತೆಗಳು, ಪ್ರಪಾತದ ಕಣಿವೆಗಳು, ಬೆಟ್ಟದ ತುದಿಯಲ್ಲಿ ಕಾಣಿಸುವ ಸೂರ್ಯೋದಯ, ಕತ್ತಲೆ ಕೋಣೆಯ ಗೋಡೆ, ಊಪ್ಸ್!!! ಎಲ್ಲಾನೂ ಹೇಳಿ ಮುಗಿಸಿದೆ ಅಂತ ಕಾಣುತ್ತೆ.

ಕೆ ಕಲ್ಯಾಣರ ಸಾಹಿತ್ಯಕ್ಕೆ ಮರುಳಾಗಿ ನನಗೂ ಅವರ ಥರ ಹಾಡು ಬರಿಯಬೇಕು ಅಂತ ಅನ್ನಿಸಿದ್ದು ಸುಳ್ಳಲ್ಲ. ಅವತ್ತಿನಿಂದ ನಾ ಅವರ ಅಭಿಮಾನಿಯಾದೆ. ದೇವಾ ಅವರ ಮೆಲೋಡಿಯಸ್ ಸಂಗೀತವೇ ಅಲ್ಲವೇ ಈ ಚಿತ್ರದ ಹೈಲೈಟ್! ಒಂದು ಕೋಟಿ ಸಲ ಕೇಳಿದರೂ ಬೇಸರ ತರಿಸದ ಹಾಡುಗಳು ಎಂದರೆ ಎಷ್ಟೊಂದು ಶ್ರೇಷ್ಠ ಸಂಗೀತವನ್ನು ನೀಡಿದ್ದಾರೆ ದೇವಾ! ಇದಕ್ಕಿಂತ ಉತ್ಕೃಷ್ಟ ಸಂಗೀತ ಬೇಕೇ. ನಾಯಕಿಯು ಗಂಡ ಮನೆಯಲ್ಲಿ ಇಲ್ಲದಾಗ ತನ್ನ ಬೇಸರ ಕಳೆಯಲು ಆ ಕತ್ತಲೆ ಕೋಣೆಯೊಳಗಿನ ಗೋಡೆಯ ಮೇಲೆ ಅವನು ಬರುವಂತೆ ಮತ್ತು ಅವನ ಜೊತೆ ಮಾತನಾಡುವಂತೆ ಕಲ್ಪಿಸಿಕೊಳ್ಳುವುದು ಎಂತಹ ಅದ್ಭುತ ಕಲ್ಪನೆ ಮತ್ತು ಅನುಭವ ಅಲ್ಲವೇ? ಒಬ್ಬ ಅತೀ ಮುಗ್ದ ಮನುಷ್ಯ, ಸಂಭಾಯಿತ ತನ್ನ ಆಪ್ತ ಮಿತ್ರನ ಹೆಂಡತಿಯನ್ನು ಪಡೆಯಲು ಅವನನ್ನೇ ಕೊಲ್ಲುವಷ್ಟು ಕ್ರೂರ ಮನಸ್ಸಿನವನಾಗುತ್ತಾನೆ! ಇದೇ ಈ ಕಥೆಯ ಗಟ್ಟಿತನ. ದಿನೇಶ್ ಬಾಬು ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ ಮತ್ತು ನಿರ್ದೇಶನ ಎಲ್ಲವನ್ನು ಎಷ್ಟೊಂದು ಅಚ್ಚುಕಟ್ಟಾಗಿ ಪರಿಪೂರ್ಣವಾಗಿ ನಿಭಾಯಿಸಿದ್ದಾರೆ! ರಮೇಶ್ ಅರವಿಂದ್ ಅವರು ಅಭಿಷೇಕ್ ಭಾರದ್ವಾಜ್ ಪಾತ್ರದ ಮೂಲಕ ನೋಡುಗರಿಗೆ ನಟನೆಯ ಅಭಿಷೇಕವನ್ನೇ ಮಾಡಿಸುತ್ತಾರೆ. ಸುಹಾಸಿನಿ ಮಣಿರತ್ನಂರ ವೀಣಾ ಹೇಮಂತ್ ಪಾತ್ರವೇ ಅಲ್ಲವೇ ಅಮೃತವರ್ಷಿಣಿ! ಚಿತ್ರದ ಕೇಂದ್ರಬಿಂದು. ಅಮೃತವರ್ಷಿಣಿಯ ಆ ಸಿಹೀನಗು, ಮುತ್ತುದುರಿಸಿದಂತೆ ಮಾತುಗಳು, ಅವಳ ಅಮೃತದಂಥಾ ಪವಿತ್ರ ಪ್ರೀತಿ ಎಲ್ಲವೂ ನೋಡುಗರಿಗೆ ಅಮೃತಧಾರೆಯನ್ನು ಹರಿಸುತ್ತದೆ. ಶರತ್ ಬಾಬು ಅವರು ಹೇಮಂತ್ ಪಾತ್ರದಾರಿ, ತನ್ನ ಪ್ರಬುದ್ಧ ನಟನೆಯಿಂದ ಹಿತವಾದ ಚಳಿಯನ್ನುಟುಮಾಡಿ, ಕೊನೆಯಲ್ಲಿ ಚಳಿಯಲ್ಲಿ ಮಾಗಿದ ಎಲೆ ಬಿದ್ದು ಹೋದಂತೆ ಪ್ರಪಾತಕ್ಕೆ ಬಿದ್ದು ಮರೆಯಾಗುವಿನ ದೃಶ್ಯ ಎಂಥವರ ಮನವನ್ನೂ ಕಲಕಿಬಿಡುತ್ತದೆ.

ಇನ್ನೂ ಎಷ್ಟು ಸಾರಿಯಾದ್ರೂ ಈ ಚಿತ್ರ ನೋಡಬಲ್ಲೆ, ಎಷ್ಟು ಸಾರಿಯಾದ್ರೂ ಈ ಸಂಗೀತ ಕೇಳಬಲ್ಲೆ, ಅದು ನನಗೆ ಯಾವಾಗಲೂ ಅಮೃತದ ಧಾರೆಯನ್ನು ಸುರಿಸುವ ಅಮೃತವರ್ಷಿಣಿಯಾಗಿಯೇ ಇರುತ್ತಾಳೆ.

  • ಅಮಿತ ಪಾಟೀಲ, ಆಲಗೂರ । ೦೧-೦೫-೨೦೧೭