ಸಾವಿರ ಸ್ವರ್ಗಗಳ ಖುಷಿ

ನೀ ಬಂದ ಆ ಅಮೃತ ಘಳಿಗೆಯಲ್ಲಿ
ಬೆಳ್ಳಿ ಬೆಳದಿಂಗಳು ಮೂಡಿದೆ ಮನೆತುಂಬ
ಮಹೋನ್ನತ ಸಂತಸ ಹರಡಿದೆ ಮನತುಂಬ

ನಿನ್ನ ಮೊದಲ ಹುಸಿ ಅಳು ಹೃದಯವನ್ನು ಹಗುರಾಗಿಸಿದೆ
ನೀ ನಕ್ಕಾಗಲಂತೂ ಕುಣಿದು ಕುಪ್ಪಳಿಸಬೇಕೆನಿಸುತ್ತದೆ

ನಿನ್ನ ಯೆಳೆಯುಸಿರು ಕೈ ತಾಕಿದಾಗ
ಸಿಹಿಮುತ್ತಿನ ಖಜಾನೆ ಸಿಕ್ಕಷ್ಟು ಹಿತವೆನಿಸುತ್ತದೆ
ನಿನ್ನ ಒಂದೊಂದು ಉಸಿರ ಕಣಗಳು ಹೂಮಳೆ ತರಿಸುತ್ತವೆ.

ನಿನ್ನ ಕೋಮಲ ರೋಮಗಳು ತಾಕಿದರೆ ರೋಮಾಂಚನವಾಗುತ್ತದೆ
ಎಳೆಹೃದಯ ಬಡಿತ ಕಿವಿಗೆ ತಾಕಿದೊಡೆ ಪ್ರೀತಿಯ ಜ್ಞಾನೋದಯವಾಗುತ್ತದೆ

ನೀನು ಪುಟ್ಟ ಕೈ ಕಾಲುಗಳನ್ನು ಬಡಿದಾಡುವಾಗ ಪರಮಶಿವ ಕುಣಿದಂಗಾಗುತ್ತದೆ

ನಿನ್ನ ಆಕಳಿಕೆ ನನ್ನ ಮತ್ತೇರುವಂತೆ ಮಾಡುತ್ತದೆ
ನಿನ್ನ ಸುಖನಿದ್ರೆ ಸಾವಿರ ಸ್ವರ್ಗಗಳನ್ನು ಗೆದ್ದಷ್ಟು ಖುಷಿ ನೀಡುತ್ತದೆ.

– ಅಮಿತ ಪಾಟೀಲ, ಆಲಗೂರ
೧೩-೦೨-೨೦೧೭

Advertisements

ಮೀರಾ ಮಾಧವ

meera_maadhava

ಹೇ ಮಾಧವ,
ಇರುಳಿನಲ್ಲೂ ನೆರಳಾಗಿ
ಬರುವ ನೀ
ಮನಕೆ ಬೆಚ್ಚನೆಯ
ಮುದ ನೀಡುವೆ|

ಹೇ ಘನಶಾಮ,
ತಂಬೂರಿಯ ತಂತಿಯ
ಮೇಲೆ ನವಿಲುಗರಿಯಾಡಿಸಿ
ಸ್ವರ ಸಮ್ಮೇಳನ ನಡೆಸಿ
ರೋಮಾಂಚನಗೋಳಿಸುವೆ|

ಹೇ ಮದಸೂಧನ,
ದೀಪವಾಗಿ ನಾ ಉರಿಯಲು
ಮನದ ಬತ್ತಿಯೊಳಗೆ
ನೀ ಎಣ್ಣೆಯಾಗಿ ಹರಿದು
ಹೃದಯ ಹದಮಾಡುವೆ|

ಹೇ ಜನಾರ್ದನ,
ನೀ ಬರುವ ದಾರಿಯಲ್ಲಿ
ಹೂವುಗಳ ರಾಶಿಯಾಗಿ ಮಲಗಿ
ನಿನ್ನ ಪಾದಕಮಲಗಳ
ಸ್ಪರ್ಶದಿಂದ ಜನ್ಮ ಪಾವನವಾಗಿಸುವೆ|

ಹೇ ನಂದಗೋಪಾಲ,
ಹಸುವಿನ ಮೇಲೆ ಆಸೀನನಾಗಿ
ನೀ ಕೊಳಲು ನುಡಿಸುವಾಗ
ನಾ ಕೇಳುತ್ತ ಕೇಳುತ್ತ
ನಿನ್ನೊಳಗೊಂದಾಗಿಬಿಡುವೆ|

– ಅಮಿತ ಪಾಟೀಲ, ಆಲಗೂರ
೩೧-೦೧-೨೦೧೭

ಅಮ್ಮ, ಪುಟ್ಟ ಮತ್ತು ಚಂದಿರ

full-moon

ನೋಡೊ ಪುಟ್ಟ ಅಲ್ಲೆ
ಬೆಳ್ಳಿ ಬೆಟ್ಟದ ಮೇಲೆ|

ಗುಂಡು ಮೊಗದ ಚಂದಿರ
ಹಾಲುಗಲ್ಲದ ಸುಂದರ|

ಬೆಳ್ಳಿಯ ರಥವನ್ನೇರಿ
ಚಂಗನೆ ಆಗಸಕ್ಕೆ ಹಾರಿ|

ಬರುವನು ನಿನ್ನ ನೋಡಲು
ಕೊಡುವನು ಚಂಡು ಆಡಲು|

ನಾ ಕೊಡುವೆ ನಿಮಗೆ ಬೆಣ್ಣೆ
ಬಾಯಿ ಚಪ್ಪರಿಸಿ ತಿನ್ನಿ ಕಣ್ಣೆ ಕಣ್ಣೆ|

ಹಿಗೇ ಕೆಳುತ ನನ್ನ ಕವನ
ನಿನೀಗ ತಿನ್ನು ಹಾಲು-ಅನ್ನ|

– ಅಮಿತ ಪಾಟೀಲ, ಆಲಗೂರ
೦೯-೦೧-೨೦೧೭

ಮುತ್ತು

wallpapers-1366x768

ಹಾಲು ಮುತ್ತೊಂದು ಅಳುತ್ತಿತ್ತು
ಸಾಗರದ ಕಿನಾರೆಯ ಕಪ್ಪು ಉಸುಕಿನಲಿ

ಕಣ್ಣೊರೆಸಿದೆ, ಮುತ್ತೇ ಅಳುವೆ ಏಕೆ?
ನಿನಗ್ಯಾರು ಹಾಲುಗೆನ್ನೆಗೆ ಮುತ್ತಿಟ್ಟಿಲ್ಲವೇ?

ಮುತ್ತು ನಾಚಿ ನೀರಾಯಿತು
ಸಾಗರದೊಳಗೆ ಹರಿದು ಲೀನವಾಯಿತು

ಸಾಗರದೆಡೆಗೆ ನೋಡಿದೆ ಒಮ್ಮೆ
ಅಲೆಗಳು ಕಾಲಿಗಪ್ಪಳಿಸಿ ಮುತ್ತಿಟ್ಟವು

ಕಾಲುಗಳನ್ನೊಮ್ಮೆ ನೋಡಿಕೊಂಡೆ
ನೊರೆಯು ಲಿಪ್ಸಟಿಕ್ ತರ ಬೆರಳುಗಳಿಗೆ ಮೆತ್ತಿಕೊಂಡಿತ್ತು

ನಾನು ನಾಚಿ ನಕ್ಕೆ ಅಷ್ಟೇ…

– ಅಮಿತ ಪಾಟೀಲ, ಆಲಗೂರ
೨೬-೧೨-೨೦೧೬

ಸೀಮೆಯಾಚೆ ಸುಂದರಿಗೆ…

seeme_yache_sundari

ಸೀಮೆಯಾಚೆ ಸುಂದರಿಯೇ!

ಮಧುಗಿಂತಲೂ ಸಿಹಿ
ಹೀರಿ ನೋಡ ಈ ಕನ್ನಡ !

ಕೋಗಿಲೆಗಿಂತಲೂ ಮಧುರ
ಬಾರ ಕನ್ನಡದಲ್ಲೊಮ್ಮೆ ಹಾಡ !

ಚಿನ್ನಕ್ಕಿಂತಲೂ ಪರಮ
ಕನ್ನಡದಲ್ಲೊಮ್ಮೆ ಮಾತಾಡ !

ಹಾಲಿಗಿಂತಲೂ ಶುಧ್ಧ
ಓದಿದರ ದೂರ ನಿನ್ನ ದುಗುಡ !

ಪ್ರಕೃತಿಯ ಮಹಾರಾಜ
ನೋಡಬಾರ ನಮ್ಮ ಮಲೆನಾಡ !

ಸುವಾಸನೆಗೆ ಸವಾಲು
ಕನ್ನಡಿಗರ ಹೆಮ್ಮೆ ಶ್ರೀಗಂಧ ಗಿಡ !

ಕಲ್ಲಿನಲ್ಲಿ ಜೀವವಿರುವ
ಶೃಂಗಾರ ಶಿಲ್ಪಕಲಾ ಬೀಡ !

ಮುಗಿಯದ ಐಶ್ವರ್ಯ
ಕನ್ನಡ ಯಾವಾಗಲೂ ತುಂಬಿದ ಕೊಡ !

ಬಲಗಾಲಿಟ್ಟು ಒಳಗೆ ಬಾರ
ನಾಚಿ ಹೊರ ನಿಲ್ಲಬೇಡ !

ನೀ ಎಂದೂ ಮರೆಯಲಾಗದ
ಈ ಕಸ್ತೂರಿ ಕನ್ನಡ ಚಂದನದ ಬೀಡ.

– ಅಮಿತ ಪಾಟೀಲ, ಆಲಗೂರ
೧-೧೧-೨೦೧೬

ಮಳೆಯ ಮೇಳ

boy_at_rain

ಬಿಸಿಲಿಗೆ ಬಾಯ್ಬಿಟ್ಟ
ಭೂಮಿಗೆ ಸಂಜಿವಿನಿಯಾಗಿ
ಸೂರ್ಯನೆದುರು ಸಮರ ಹೂಡಿ
ಮೋಡದೊಳಗೆ ಮುಸುಕು ಹಾಕಿ
ಬಿಸಿಲಿಗೇ ಬರೆ ಎಳೆದು
ಹನಿಯ ಮೇಲೆ ಹನಿ ಹನಿಯಾಗಿ
ಪರೇಡ್ ನಡೆಸುವ ಸೈನಿಕರಂತೆ
ರಭಸವಾಗಿ ಧೂಳಿನ ಕೆನ್ನೆ ಕಚ್ಚಿ
ಧೋ ಧೋ ಎಂದು ಧೂಳಿನ ಹೋಳಿಯಾಡಿ
ಮಣ್ಣಿನ ಸುವಾಸನೆಯ ಘಂ ಎಬ್ಬಿಸಿ
ಚಟಪಟ ನಾದವನ್ನು ಎಡೆಬಿಡದೆ ಗುನುಗಿ
ಜಲಧಾರೆಯ ಓಕುಳಿಯಾಡುವ
ಈ ಮಳೆಯ ಮರ್ಮವೇನು?

ಮಳೆಯ ನೋಡಿದ ಮಗು
ಹಿಗ್ಗಿ ಹೀರೇಕಾಯಿಯಾಗಿ
ಹರಿವ ಕೆಮ್ಮಣ್ಣ ನೀರಿಗೆ ಹಾರಿ
ಅದರೊಟ್ಟಿಗೆ ಹರಿದಾಡಿ ಕುಣಿದಾಡಿ
ಕುಪ್ಪಳಿಸಿ ಕೂಗಿ ಕೆಸರಲ್ಲಿ ಒದ್ದಾಡಿ
ಬಡಿದಾಡಿ ಕೊಳೆಮಾಡಿ
ಅಮ್ಮ ಬೈದಾಗ
ತಿನಿಕಾಡಿ ಪರದಾಡಿ ಬೆದರಿ ಕುಗ್ಗಿ
ಮೆಟ್ಟಿಲೇರಿ ಮನೆಯೊಳು ನುಗ್ಗಿ
ಮೂಲೆ ಸೇರಿ ಮರೆಯಲ್ಲಿ ಅಡಗುವ ಕಲೆ ಎಂಥದು?

ಮರುದಿನವೇ ಮೂಗಿನಲ್ಲಿ ದೊಡ್ಡಾಟ
ಗಂಟಲಲ್ಲಿ ಬಯಲಾಟ
ಎದೆಯಲ್ಲಿ ಡೊಂಬರಾಟ
ಕಣ್ಣಲ್ಲಿ ಕೋಲಾಟ
ತಲೆಯಲ್ಲಿ ನಗಾರಿಯಾಟ
ವೈದ್ಯನಿಂದ ಚುಚ್ಚಾಟ
ಅಮ್ಮನಿಂದ ಗೊಣಗಾಟ
ಅಪ್ಪನಿಂದ ಬಡಿದಾಟ
ಪಾಪ! ಮಗುವಿಗೆ ಎಲ್ಲಿಲ್ಲದ ಉರಿಯಾಟ
ನೆಗಡಿಗೆ ಕೆಮ್ಮಿಗೆ ತಲೆನೋವಿಗೆ
ಎದೆನೋವಿಗೆ ಕಣ್ಣುರಿಗೆ ಯಮರಾಜನ ಪಟ್ಟ
ಈ ‘ಆಟ’ಗಳು ಎಷ್ಟು ಭಯಂಕರ?

ಮಗು ಇಂಗು ತಿಂದ
ಮಂಗನಂತೆ ಮುಖಮಾಡಿ
ವೈದ್ಯ ಕೊಟ್ಟ ಕಹಿಗುಳಿಗೆ
ನುಂಗಿ ನಿರು ಕುಡಿದು
ಚಳಿಗೆ ಹೆದರಿ
ಹಾಸಿಗೆಯ ಗೂಡು ಸೇರಿ
ಬೆಚ್ಚನೆಯ ಹೊದಿಕೆ ಹೊತ್ತು
ಮನದಲ್ಲಿ ಕನಸು ಬಿತ್ತಿ
ಕಲ್ಪನೆಗೆ ಕೀಲಿ ಕೊಟ್ಟು
ಸಿಹಿನಿದ್ರೆಗೆ ಜಾರಿಕೊಳ್ಳುವ ಸುಮಧುರ ಸೂತ್ರವೇನು?

– ಅಮಿತ ಪಾಟೀಲ, ಆಲಗೂರ

ಪ್ರೇಮಾನುಭವ

baby-smile

ಅರಳುವ ಹೂವಿನ
ನರ್ತನ ದೃಶ್ಯವ
ನೋಡಿದ ಕ್ಷಣವೇ
ಅರಳುವುದು ಪ್ರೇಮ |

ಹುಟ್ಟಿದ ಮಗುವಿನ
ಪುಟ್ಟ ನಗುವನು
ನೋಡಿದ ಕ್ಷಣವೇ
ಹುಟ್ಟುವುದು ಪ್ರೇಮ|

ಚಿಗುರಿನ ಚೈತ್ರದ
ಹಚ್ಚ ಹಸಿರನು
ನೋಡಿದ ಕ್ಷಣವೇ
ಚಿಗುರುವುದು ಪ್ರೇಮ|

ಉದಯಿಸುವ ರವಿಯ
ರಮ್ಯ ನೋಟವ
ನೋಡಿದ ಕ್ಷಣವೇ
ಉದಯಿಸುವುದು ಪ್ರೇಮ|

ಗೂಡೊಳಗಿನ ಗುಬ್ಬಿಯು
ಇಣುಕಿ ನೋಡುವ ನೋಟವ
ನೋಡಿದ ಕ್ಷಣವೇ
ಗೋಚರಿಸುವುದು ಪ್ರೇಮ|

ಅಂತರಂಗದ ಅಲೆಯು
ಅಮೃತದ ಅಲೆಯ ಮೇಲೆ
ಅಲೆಯುವಾಗ ಅನುಭವಿಸುವ
ಅನುಭವವೇ ಪ್ರೇಮ|

– ಅಮಿತ ಪಾಟೀಲ, ಆಲಗೂರ