ಅಸ್ತಿತ್ವ

water_lily_with_fishes

ನನ್ನ ಆಫೀಸಿನ ಐದನೇ ಮಹಡಿಯ ಕೆಫೆಟೇರಿಯದಲ್ಲಿ ಕುಳಿತು ನನ್ನ ತಂಡದ ಜೊತೆ ಊಟ ಮಾಡುತ್ತಿದ್ದೆ. ಪಕ್ಕದಲ್ಲಿ ಸಿಮೆಂಟಿನಿಂದ ಕಟ್ಟಿಸಿದ ಒಂದು ಚೌಕಾಕಾರದ ಪುಟ್ಟ ಕೊಳ. ನೀರಿನಲ್ಲಿ ಬೆಳೆಯುವ ಏರೋಪಿಯನ್ ಬಿಳಿ, ಗುಲಾಬಿ ಮತ್ತು ಹಳದಿ ಲಿಲ್ಲಿ ಹೂವುಗಳು ಅರಳಿ ವಯ್ಯಾರದಿಂದ ಗಾಳಿಗೆ ನುಲಿಯುತ್ತಿದ್ದವು. ಹೋಗು ಬರುವವರಿಗೆ ಲೈನು ಹೊಡೆದು ತನ್ನತ್ತ ಸೆಳೆಯುತ್ತಿದ್ದವು. ಹೂವಿನ ಬುಡಕ್ಕೆ ಅಗಲವಾದ ಹಸಿರು ಎಲೆಗಳು ನೀರಿನ ಮೇಲೆ ಹರಡಿಕೊಂಡಿದ್ದವು. ಕೊಳದ ತುಂಬೆಲ್ಲ ಚಿಕ್ಕ ಚಿಕ್ಕ ಮೀನುಗಳು ಸ್ವಚಂದವಾಗಿ ಈಜಾಡುತ್ತಿದ್ದವು. ಆ ದೃಶ್ಯ ಎಂಥವರನ್ನೂ ಆಕರ್ಷಿಸುವಂತಿತ್ತು. ಮೂರು ಜನ ಊಟ ಮುಗಿಸಿ ಕೊಳದ ಹತ್ತಿರ ಬಂದು ಹೂಗಳ ಅಂದವನ್ನು ಮತ್ತು ಮೀನುಗಳ ಚೆಲ್ಲಾಟವನ್ನೂ ಆಸ್ವಾಧಿಸಹತ್ತಿದರು. ನಂತರ ಟಿಶ್ಯೂ ಪೇಪರಿನಲ್ಲಿ ಕಟ್ಟಿಕೊಂಡು ಬಂದ ಅನ್ನವನ್ನು ಒಂದೊಂದೇ ಅಗಳುಗಳಂತೆ ನೀರಿನಲ್ಲಿ ಹಾಕುತ್ತಿದ್ದರು. ಮೀನುಗಳು ತಡಬಡಿಸಿ ಬಡಿದಾಡಿ ಒಂದರ ಮೇಲೊಂದು ಬಿದ್ದು ಬಿದ್ದು ಅನ್ನದ ಅಗಳುಗಳನ್ನು ತಿನ್ನತೊಡಗಿದವು. ನಂತರ ಅವರು ತಮ್ಮ ತಮ್ಮ ಕೆಲಸಗಳಿಗೆ ಹೊರಟು ಹೋದರು.

ನನಗೆ ಆ ದೃಶ್ಯ ನೋಡಿ ತುಂಬಾ ಖುಷಿಯಾಯಿತು. ಮೀನುಗಳಿಗೆ ಎಷ್ಟು ಚಂದ ಊಟ ಹಾಕಿ ಹೋದರು! ಅಂತ ಅಂದುಕೊಳ್ಳುವಾಗಲೇ ಇತ್ತಕಡೆ ನಮ್ಮ ಊಟದ ಟೇಬಲ್ಲಿಗೆ ಬೂದು ಬಣ್ಣದ ಪಾರಿವಾಳಗಳು ಸಹ ಅನ್ನದ ಅಗಳಿಗಾಗಿ ನಮ್ಮ ಕಡೆಗೆ ಬರುತ್ತಿದ್ದವು. ನನ್ನ ಗೆಳೆಯನೊಬ್ಬ ತನ್ನ ತಟ್ಟೆಯಲ್ಲಿಯ ಸ್ವಲ್ಪ ಅನ್ನವನ್ನು ಅವುಗಳಿಗೆ ಹಾಕಿದ. ಹಸಿದ ಪಾರಿವಾಳಗಳು ಹಿಗ್ಗಿನಿಂದ ಬಂದು ಅನ್ನವನ್ನು ನುಂಗತೊಡಗಿದವು. ಅದನ್ನು ದೂರಿನಿಂದಲೇ ನೋಡಿದ ಕೆಲಸದ ಮೇಲುಸ್ತುವಾರಿಯವ ಬಂದು ಎಲ್ಲ ಪಾರಿವಾಳಗಳನ್ನು ಓಡಿಸಿದ. ನಾವು ” ಅರ್ರೆ ಅವುಗಳನ್ನ ಯಾಕೆ ಓದಿಸ್ತೀರಿ ಸ್ವಾಮಿ? ಪಾಪ ತಿಂತಿದಾವೆ..” ಅಂತ ಅಂದೆವು. ಅವನು ” ಸರ್, ಹಂಗೆಲ್ಲಾ ಅವುಗಳಿಗೆ ಅನ್ನ ಹಾಕಿ ಸಲುಗೆ ಹಚ್ಚಬೇಡಿ.. ಅವು ದಿನವೂ ಬಂದು ಟೇಬಲ್ ಮೇಲೆ ಹಿಕ್ಕೆ ಹಾಕಿ ಹೋಗುತ್ತವೆ. ಊಟ ಮಾಡುವಾಗ ಮಧ್ಯೆ ಹಾರಿ ಬಂದು ಪುಕ್ಕಗಳನ್ನು ಬೀಳಿಸಿ ಹೋಗುತ್ತವೆ. ಆ ಪುಕ್ಕಗಳಿಂದ ಯಾವ ಯಾವದೋ ಅಲರ್ಜಿ ರೋಗಗಳು ಬರುತ್ತೆ. ಆಮೇಲೆ ಎಂಪ್ಲಾಯೀಸ್ ನಮ್ಮ ಮೇಲೆ ದೂರು ನೀಡಿ ನಮ್ಮ ಅನ್ನಕ್ಕೆ ಕುತ್ತು ಬರುವಂತೆ ಮಾಡುತ್ತಾರೆ. ಹಿಂಗೇ ಒಬ್ಬರು ಜರ್ಮನಿ ಕ್ಲೈಂಟ್ ಬಂದಾಗ ಲೀಲಾ ಪ್ಯಾಲೇಸನಿಂದ ತಂಡ ದುಬಾರಿ ಊಟದಲ್ಲಿ ಪುಕ್ಕ ಬೀಳಿಸಿ ಹೋಗಿದ್ದವು. ಕ್ಲೈಂಟ್ ಸಕತ್ ಸಿಟ್ಟು ಮಾಡಿಕೊಂಡು ಕೂಗಾಡಿದ್ದರು. ಆ ಪರಿಸ್ಥಿತಿ ನಿಭಾಯಿಸಲು ಕಂಪನಿ ಎಮ್ ಡಿ ಬರಬೇಕಾಗಿತ್ತು. ದಯವಿಟ್ಟು ಅವುಗಳಿಗೆ ಏನೂ ಹಾಕಬೇಡಿ.” ನಮಗೆ ಏನು ಮಾತನಾಡಬೇಕೆಂದು ಅರ್ಥವಾಗಲಿಲ್ಲ. ಸುಮ್ಮನೆ ಕುಳಿತುಕೊಂಡೆವು.

ತಿನ್ನಲು ಏನೂ ಸಿಗದ ಪಾರಿವಾಳಗಳು ಸೊಟ್ಟ ಮೊರೆ ಹಾಕಿಕೊಂಡು ಕೊಳದ ಹತ್ತಿರ ಹೋದವು. ಅವುಗಳಿಗೆ ಸ್ವಚಂದವಾಗಿ ಈಜಾಡಿ ಹೊಟ್ಟೆತುಂಬ ಅನ್ನ ತಿಂದು ತೇಗುತ್ತಿರುವ ಮೀನುಗಳು ಕಂಡವು. ತಕ್ಷಣಕ್ಕೆ ನೀರಿನಲ್ಲಿ ಚುಂಚು ತಿವಿದು ಸಿಖ್ಖಷು ಮೀನುಗಳನ್ನು ಹೆಕ್ಕತೊಡಗಿದವು. ಅಷ್ಟರಲ್ಲಿ ದೂರದ ಮೊಬೈಲ್ ಟವರ್ ಒಂದರ ಮೇಲೆ ಕುಳಿತು ಈಕಡೆನೇ ನೋಡುತಿದ್ದ ಒಂಟಿ ಹದ್ದೊಂದು ತನ್ನ ಆನೆ ಕಿವಿಯಂತಹ ದೊಡ್ಡ ರೆಕ್ಕೆಗಳನ್ನು ಬಡಿಯುತ್ತ ಕೊಳದ ಹತ್ತಿರ ಬಂದಿತು. ಪಾರಿವಾಳಗಳು ಹದ್ದಿನ ಆರ್ಭಟಕ್ಕೆ ಹೆದರಿ ಅರೆಹೊಟ್ಟೆಯಲ್ಲಿಯೇ ಕಾಲಿಗೆ ಬುದ್ದಿ ಹೇಳಿದವು. ಹದ್ದು ತಾನೇ ಹಿಟ್ಲರ್ ಎಂದು ತಿಳಿದು ಮೀನುಗಳನ್ನು ತನ್ನ ಬೃಹತ್ತ್ ಚುಂಚಿನಿಂದ ಹೆಕ್ಕಲು ಶುರುಹಚ್ಚಿಕೊಂಡಿತು. ಹೊಟ್ಟೆತುಂಬ ತಿಂದು ಮೀಸೆ ಮೇಲೆ ಕೈಯಾಡಿಸಿದಂತೆ ತನ್ನ ರೆಕ್ಕೆಗಳಿಂದ ಚೂಪಾದ ಚುಂಚನ್ನು ಒರೆಸಿಕೊಂಡಿತು. ಆಕಡೆ ಈಕಡೆ ಒಮ್ಮೆ ನೋಡಿ ನನ್ನ ತಡೆಯುವವರು ಯಾರಾದ್ರೂ ಉಂಟೇ ಅಂತ ಹಾರಿಹೋಯಿತು.

ಲಿಲ್ಲಿ ಹೂವುಗಳು, ಇಲ್ಲಿ ಏನೂ ಆಗಿಯೇ ಇಲ್ಲವೆನ್ನುವಂತೆ ಹೋಗು ಬರುವವರಿಗೆ ಲೈನು ಹಾಕಿಕೊಂಡು ಮಜಾ ಉದಯಿಸುತ್ತಿದ್ದವು. ಅಳಿದುಳಿದ ಮೀನುಗಳೂ ಸಹ ಹಾಳೂರಿನಲ್ಲಿ ಉಳಿದವನೇ ಗೌಡ ಅನ್ನುವಂತೆ ಹಾಯಾಗಿ ಈಜಾಡುತ್ತಿದ್ದವು.

ಇದನ್ನೆಲ್ಲಾ ನೋಡುತ್ತಲೇ ಇದ್ದ ನನ್ನ ತಲೆಯಲ್ಲಿ ನಾನಾ ರೀತಿಯ ವಿಚಾರಗಳು ನುಸುಳತೊಡಗಿದವು. ಶಾಲೆಯಲ್ಲಿ ಓದಿದ್ದ ಆಹಾರ ಸರಪಳಿ ನೆನಪಾಯಿತು. ಹಾಗೆಯೇ ಡಾರ್ವಿನ್ನನ ನೈಸರ್ಗಿಕ ಆಯ್ಕೆ ನಿಯಮವೂ ನೆನಪಾಯಿತು. ಒಂದು ಜೀವಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬೇರೆ ಜೀವಿಗಳನ್ನು ಕೊಲ್ಲಬೇಕು ಇಲ್ಲವೇ ಅವುಗಳ ಆಹಾರ ಕಸಿದುಕೊಳ್ಳಬೇಕು. ಬಲಶಾಲಿಯಾದ ಪ್ರಾಣಿ ದುರ್ಬಲ ಪ್ರಾಣಿಗಳ ಮೇಲೆ ದಾಳಿ ಮಾಡಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ. ಮನುಷ್ಯನೂ ಹಂಗೆ ಅಲ್ಲವೇ? ಜೀವನ ನೀರಿನ ಮೇಲಿನ ಗುಳ್ಳೆ, ಯಾವ ಕ್ಷಣದಲ್ಲಿಯೂ ನಮ್ಮ ಅಸ್ತಿತ್ವ ಕಳೆದುಕೊಳ್ಳಬಹುದು.

ಮೀನುಗಳಿಗೆ ಆ ಮೂರು ಜನ ಎಂಪ್ಲಾಯೀಸ್ ಬ್ರಹ್ಮ ವಿಷ್ಣು ಮಹೇಶ್ವರರಂತೆ ಬಂದು ಹೊಟ್ಟೆಗೆ ಅನ್ನ ಹಾಕುತ್ತಾರೆ. ಪಾಪದ ಮೀನುಗಳು ಹೊಟ್ಟೆತುಂಬ ತಿಂದು ಹಾಯಾಗಿ ಈಜುತ್ತಿರಲು ಎಲ್ಲಿಂದಲೋ ಬಂಡ ಪಾರಿವಾಳಗಳಿಗೆ ತುತ್ತಾಗುತ್ತವೆ. ಎಲ್ಲಿಂದಲೋ ಯಮನಂತೆ ಬಂದ ಹದ್ದು ಪಾರಿವಾಳಗಳ ಹೊಟ್ಟೆಯಮೇಲೆ ಹೊಡೆದು ಓಡಿಸುತ್ತದೆ. ಮೀನುಗಳು ಕ್ಷಣಾರ್ಧದಲ್ಲಿ ಹಿಂಗೇ ತಿಂದು ಹಂಗೆ ಸತ್ತು ಹೋಗುತ್ತವೆ. ಹೀಗೆ ತಲೆಯಲ್ಲಿ ಏನೇನೋ ಯೋಚಿಸುತ್ತಿರುವಾಗಲೇ ಮೊಬೈಲಿನಲ್ಲಿ ಒಂದು ಇಮೇಲ್ ಬರುತ್ತದೆ. ಮೊಬೈಲ್ ಓಪನ್ ಮಾಡಿ ನೋಡಿದರೆ ನಮ್ಮ ಬಾಸ್ ಇಮೇಲ್ ಹಾಕಿರುತ್ತಾನೆ: Dear team, We shall meet at 2.30PM IST regarding today’s pending tasks at the 3rd floor meeting room. PS: Please be prepare with your points. ಇಮೇಲ್ ನೋಡಿ  ಎಲ್ಲರೂ ಪಿಕಿ ಪಿಕಿ ಒಬ್ಬರನೊಬ್ಬರ ಮುಖ ನೋಡಿಕೊಳ್ಳುತ್ತ “ಸಕ್ಕತ್ತಾಗಿ ಉಗಿತಾನೆ ಕಣ್ರೋ ” ಅಂತ ಮುಖ ಸಣ್ಣಗೆ ಮಾಡುತ್ತೇವೆ. ಸಮಯ ನೋಡಿದರೆ ೨.೨೫ ! ಊಟ ಅಷ್ಟಕ್ಕೇ ಬಿಟ್ಟು ಅರೆಹೊಟ್ಟೆಯಲ್ಲಿ ತಡಬಡಿಸಿ ಎದ್ದು ಕೈ ತೊಳೆದುಕೊಳ್ಳದೆ ನೀರು ಕುಡಿಯದೇ ಟಿಶ್ಯೂ ಪೆಪೆರಿಂದ ಕೈ ಒರೆಸಿಕೊಂಡು ಓಡಿಹೋಗುತ್ತೇವೆ.

  • ಅಮಿತ ಪಾಟೀಲ ಆಲಗೂರ । ೧೫-೦೪-೨೦೧೭
Advertisements

ವಸುಧೇಂದ್ರ ಅವರಿಗೆ ಒಂದು ಪತ್ರ

ನಾನು ವಸುಧೇಂದ್ರ ಅವರಿಗೆ ಬರೆದ ಪತ್ರ:
————————————
ಪ್ರೀತಿಯ ವಸುಧೇಂದ್ರ ಸರ್,

ಈ ಪತ್ರ ಬರೆದ ಕಾರಣ, ನಾನು ನಿಮ್ಮ ಪ್ರಬಂಧ ಸಂಕಲನಗಳಾದ “ನಮ್ಮಮ್ಮ ಅಂದ್ರೆ ನಗೀಷ್ಟ” ಮತ್ತು “ವರ್ಣಮಯ” ಪುಸ್ತಕಗಳನ್ನು ಕೊಂಡುತಂದು ಓದಿದೆ. ಅದಕ್ಕಾಗಿ ನನ್ನ ಅನಿಸಿಕೆಗಳನ್ನು ಲೇಖಕರಿಗೆ ತಿಳಿಸಬೇಕೆಂಬ ಒತ್ತಡ ನನ್ನೊಳಗೆ ಜಾಸ್ತಿಯಾಯಿತು. ಅದರ ಫಲಿತಾಂಶವೇ ಈ ಪತ್ರ.

ಮೊದಲಿಗೆ ನನ್ನ ಬಗ್ಗೆ ಸ್ವಲ್ಪ ತಿಳಿಸಲು ಬಯಸುತ್ತೇನೆ. ನಾನೂ ನಿಮ್ಮ ಹಾಗೆ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಒಂದು ಎಂಎನ್ಸೀ ಕಂಪನಿಯಲ್ಲಿ ಐದು ವರ್ಷಗಳಿಂದ ದುಡಿಯುತ್ತಿದ್ದೇನೆ. ನಾನು ಹತ್ತನೇ ತರಗತಿಯವರೆಗೂ ಓದಿದ್ದು ಕನ್ನಡದಲ್ಲಿ. ಚಿಕ್ಕಂದಿನಿಂದಲೇ ಪುಸ್ತಕ ಓದುವ ಹುಚ್ಚು. ನನ್ನ ಊರು ಬಾಗಲಕೋಟೆಯ ಜಮಖಂಡಿ ತಾಲೂಕಿನ ಆಲಗೂರು. ರಜಾ ದಿನಗಳಲ್ಲಿ ಬರೀ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಓದಿಕೊಂಡು ಇರುತ್ತಿದ್ದೆ. ನಮ್ಮಮ್ಮ “ಮಗ ಇನ್ನೂ ಊಟಕ್ಕೆ ಯಾಕೆ ಬಂದಿಲ್ಲ?” ಅಂತ ಓಣಿ ಓಣಿ ಹುಡುಕುತ್ತಿದ್ದರು. ಕೊನೆಗೆ ಯಾರೋ ಒಬ್ಬರು ಬಂದು “ಏಯ ಹುಡುಗ ನಿಮ್ಮ ಅವ್ವ ನಿನ್ನ್ ಹುಡುಕಾಡಲಿಕ್ಕೆ ಹತ್ಯಾರು, ನೀ ಇಲ್ಲಿ ಕುಂತಿ, ಹೋಗ್ ಮನೀಗೆ..” ಅಂತ ಹೇಳಿದಾಗಲೇ ತಡಬಡಿಸಿ ಎದ್ದು ಮನೆಗೆ ಓಡುತ್ತಿದ್ದೆ. ನಂತರ ಕಾಲೇಜು ದಿನಗಳಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು ಅಭ್ಯಾಸ ಮಾಡದೆ ಕವಿತೆಗಳನ್ನು ಬರೀತಿದ್ದೆ. ಒಂದೊಂದು ದಿನ ಬರೀತಾ ಬರೀತಾ ಕಾಲೇಜ್ ಹೋಗುವುದನ್ನೇ ಮರೆತು ಬಿಡುತ್ತಿದ್ದೆ.

ಆವಾಗ ತಾನೇ “ವಿಜಯ ಕರ್ನಾಟಕ” ಪತ್ರಿಕೆ ಪ್ರಾರಂಭವಾಗಿತ್ತು ಮತ್ತು ಜನಪ್ರಿಯವಾಗುತ್ತಿತ್ತು. ರವಿವಾರ ಬರುವ ಸಾಪ್ತಾಹಿಕ ಪುರವಣಿ ನನ್ನ ಅಚ್ಚುಮೆಚ್ಚಿನದಾಗಿತ್ತು. ಅದರಲ್ಲಿ ಬರುತ್ತಿದ್ದ ಕಥೆ, ಕವಿತೆ, ಪ್ರಬಂಧ, ಅಂಕಣಗಳನ್ನು ಬಿಟ್ಟು ಬಿಡದೆ ಓದುತ್ತಿದ್ದೆ. ಆವಾಗಿನ ದಿನಗಳಲ್ಲೇ ನಾನು ನಿಮ್ಮ ಕಥೆಗಳು “ಯುಗಾದಿ” ಮತ್ತು “ಮಿಥುನ” ಓದಿದ್ದು. ಹಾಗೆಯೇ ವಿವೇಕ್ ಶಾನಭಾಗ, ಜಯಂತ ಕಾಯ್ಕಿಣಿ, ಮೊಗಳ್ಳಿ ಗಣೇಶ, ಗುರುಪ್ರಸಾದ ಕಾಗಿನೆಲೆ, ರಘುನಾಥ ಚ ಹ, ಚಿಂತಾಮಣಿ ಕೊಡ್ಲೇಗೆರೆ, ಸುಮಂಗಲಾ, ಸುನಂದಾ ಕಡಮೆ, ನಾಗರಾಜ ವಸ್ತಾರೆ ಹಾಗೂ ಹಿರಿಯಲೇಖಕರಾದ ಎಸ್ ದಿವಾಕರ್, ಶಾಂತಿನಾಥ ಕುರ್ತಕೋಟಿ, ಜಿ ಎಸ್ ಆಮೂರ್ ಇನ್ನೂ ಮುಂತಾದವರ ಲೇಖನಗಳನ್ನು ಓದುತ್ತಿದ್ದೆ. ನಂತರ ನಾನು MCA ಸೀಟು ಸಿಕ್ಕಮೇಲೆ ಪಠ್ಯ ಪುಸ್ತಕಗಳ ಮೇಲೆ ನನ್ನ ಓದು ವಾಲಿಕೊಂಡಿತು. ಸಾಹಿತ್ಯದ ಸ್ಪರ್ಶ ನನಗೆ ಗೊತ್ತಿಲ್ಲದೆ ದೂರವಾಗತೊಡಗಿತು. MCA ಕೊನೆಯ ಸೆಮೀಸ್ಟೇರ್ನಲ್ಲಿದ್ದಾಗಲೇ ನನಗೆ ನೌಕರಿ ಸಿಕ್ಕಿಬಿಟ್ಟಿತು. ನಂತರ ಈ so called IT world/Corporate world ಬಗ್ಗೆ ನಿಮಗೆ ಹೇಳುವುದೇನೂ ಇಲ್ಲ. ನನ್ನ ಸಾಹಿತ್ಯದ ಓದು ಸಂಪೂರ್ಣವಾಗಿ ನಿಂತೆ ಹೋಯಿತು. ಯಾವಾಗಲಾದರೊಮ್ಮೆ ಇಂಗ್ಲೀಷ ಪುಸ್ತಕಗಳನ್ನು ಓದುತ್ತಿದ್ದೆ. ಅದೂ ಮ್ಯಾನೇಜ್ಮೆಂಟ್, ತಂತ್ರಜ್ಞಾನ ಸಂಬಂಧಿಸಿದ ಪುಸ್ತಕಗಳು. ಅದು ಬಿಟ್ಟರೆ ಬರೀ ಇಂಟರ್‌ನೆಟ್, ಟೀವೀ ಇಲ್ಲವೇ ಸಿನಿಮಾ ಅಂತ ೫ ವರ್ಷಗಳು ಕಳೆದು ಹೋದವು.

ಒಮ್ಮೆ ನನಗೆ ಇಂಟೆರ್ನೆಟ್ಟಿನಲ್ಲಿ ಚುಕ್ಕುಬುಕ್ಕು ಡಾಟ್ ಕಾಮ್ ತಾಣದ ಪರಿಚಯವಾಯಿತು. ಅದರ ಚಂದವಾದ ಅಲಂಕಾರ, ಅತ್ತ್ಯುತ್ತಮ ಗುಣಮಟ್ಟದ ಲೇಖನಗಳು ನನ್ನನ್ನು ಮೂಖಸ್ಮಿತನಾಗಿಸಿ ಬಿಟ್ಟವು. ಇಂತಹ ಜಾಲತಾಣ ಕನ್ನಡದಲ್ಲೂ ಇರಲು ಸಾಧ್ಯವೇ ಎನ್ನಿಸಿಬಿಟ್ಟಿತು. ತುಂಬಾ ಪ್ರಭಾವಿತನಾದೆ. ನಂತರ ಅದರಲ್ಲಿಯ ಎಲ್ಲ ಲೇಖನಗಳನ್ನು ಜಾಲಾಡಿದೆ. ಅದರಲ್ಲಿ ನಾನು ಶಾಲೆಯಲ್ಲಿದ್ದಾಗ ವಿಜಯ ಕರ್ನಾಟಕ ಸಾಪ್ತಾಹಿಕ ಪುರವಣಿಯಲ್ಲಿ ಓದಿಕೊಂಡಿದ್ದ ಎಲ್ಲ ಬರಹಗಾರರು ಸಿಕ್ಕಿಬಿದ್ದರು!!! ತುಂಬಾ ಆಶ್ಚರ್ಯವಾಯಿತು ಮತ್ತು ಅಷ್ಟೇ ಸಂತೋಷವಾಯಿತು. ಜೊತೆಗೆ ಹಿರಿಯ ಸಾಹಿತಿಗಳು ಸಿಕ್ಕರು. ಈ ಚುಕ್ಕುಬುಕ್ಕು ತಾಣದಿಂದ ನನ್ನ ಹಳೆಯ ಸಿಹಿ ಕಲ್ಲುಸಕ್ಕರೆಯ ದಿನಗಳನ್ನು ಮರಳಿ ಪಡೆಯುವಂತಾಯಿತು. ನಂತರ ದಿನಾಲೂ ೪-೫ ಸಲ ತಾಣಕ್ಕೆ ಭೆಟ್ಟಿ ನೀಡುತ್ತಿದ್ದೆ. ಆದರೆ ತುಂಬಾ ವಿಷಾದವೆಂದರೆ ಚುಕ್ಕುಬುಕ್ಕು ತಾಣ ೨ ತಿಂಗಳಿಂದ ನಿಂತುಹೋಗಿದೆ. ಈ ತಾಣ ನನಗೆ ಸಾಹಿತ್ಯದ ಒಂದು ಪಕ್ಷಿನೋಟವನ್ನುತೋರಿಸಿತು. ಯಾರ್ಯಾರು ಬರೀತಾರೆ, ಏನೇನು ಬರೀತಾರೆ, ಎಲ್ಲೆಲ್ಲಿ ಇರ್ತಾರೆ, ಇಲ್ಲಿಯವರೆಗೂ ಯಾವ ಯಾವ ಪುಸ್ತಕಗಳನ್ನು ಬರೆದಿದ್ದಾರೆ, ಯಾರ ಪುಸ್ತಕ ಯಾವ ಪ್ರಕಾಶಕರು ಪ್ರಕಾಶಿಸಿದರು, ಅದು ಎಲ್ಲಿ ಹೇಗೆ ಲಭ್ಯವಿರುತ್ತದೆ, ಯಾರು ಪುಸ್ತಕದ ಮುಖಪುಟ ವಿನ್ಯಾಸ ಮಾಡಿದರು, ಕರ್ನಾಟಕದಲ್ಲಿ ಯಾವ ಯಾವ ಮುಖ್ಯ ಪುಸ್ತಕದ ಅಂಗಡಿಗಳು ಇವೆ. ಎಲ್ಲವೂ ಈ ತಾಣದಿಂದ ತಿಳಿದುಕೊಂಡೆ. ನಂತರ ಬರಿ ಇಂಟರ್‌ನೆಟ್ ನಲ್ಲಿ ಓದಿಕೊಂಡಿದ್ದ ನಾನು ಪುಸ್ತಕಗಳನ್ನು ಕೊಂಡು ಓದಲು ಶುರು ಮಾಡಿದೆ. ಕನ್ನಡ ಭಾಷೆಯಮೇಲೆ ಹಿಡಿತ ಸಾಧಿಸಲು ಕನ್ನಡ ಶಬ್ದಕೋಶ ಓದಲು ಶುರು ಮಾಡಿದೆ. ಚಂದ್ರಶೇಖರ ಕಂಬಾರ, ಅನಂತ ಮೂರ್ತಿ, ಎಸ್ ದಿವಾಕರ್, ವಿವೇಕ ಶಾನಭಾಗ, ಜಯಂತ ಕಾಯ್ಕಿಣಿ, ವಸುಧೇಂದ್ರ, ಜೋಗಿ, ಶಾಂತಿನಾಥ ದೇಸಾಯಿ, ಪೂರ್ಣಚಂದ್ರ ತೇಜಸ್ವಿ, ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಪುಸ್ತಕಗಳನ್ನು ಕೊಂಡುಕೊಂಡೆ.

ಇತ್ತೀಚಿಗೆ ನಿಮ್ಮ “ನಮ್ಮಮ್ಮ ಅಂದ್ರೆ ನನಗಿಷ್ಟ” ಮತ್ತು “ವರ್ಣಮಯ” ಪುಸ್ತಕಗಳನ್ನು ಓದಿದೆ. ಒಮ್ಮೆ ಓದಲು ಶುರು ಮಾಡಿದರೆ ಸರಾಗವಾಗಿ ಓದಿಸಿಕೊಂಡು ಬಿಡುತ್ತವೆ. ನಿಮ್ಮಷ್ಟು ಸರಳ ಸುಂದರ ಬರವಣಿಗೆ ನಾನು ಎಲ್ಲೂ ಓದಿಲ್ಲ. ಬರೀ ೫ ನೇ ತರಗತಿ ಓದಿದ ವ್ಯಕ್ತಿ ಕೂಡ ನಿಮ್ಮ ಪುಸ್ತಕವನ್ನು ಓದಿ ಅರ್ಥೈಸಿಕೊಳ್ಳಬಲ್ಲ. ಅದು ನಿಮ್ಮ ಬರವಣಿಗೆಯ ತಾಕತ್ತು ಅಂತ ಹೇಳಬಯಸುತ್ತೇನೆ. ಮತ್ತು ನಿಮ್ಮ ಪುಸ್ತಕಗಳು ಮರು ಮುದ್ರಣ ಕಾಣುವ ಕಾರಣವೂ ಅಂತ ಹೇಳಬಯಸುತ್ತೇನೆ. ನಿಮ್ಮ ಪುಸ್ತಕದ ಮುಖಪುಟ ವಿನ್ಯಾಸವು ಸಹ ಕಾರಣವಾಗಿದೆ.

“ನಮ್ಮಮ್ಮ ಅಂದ್ರೆ ನನಗಿಷ್ಟ” ಪುಸ್ತಕದಲ್ಲಿ ನನಗೆ ಅತಿ ಇಷ್ಟವಾದ ಪ್ರಬಂಧಗಳು ಎಂದರೆ : “ನಮ್ಮಮ್ಮ ಅಂದ್ರೆ ನನಗಿಷ್ಟ”, “ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳು”, “ನಮ್ಮೂರಿಗೂ ಅಣ್ಣಾವ್ರು ಬಂದಿದ್ರು” ಮತ್ತು “ಹಾಡು ಹೆಣೆದ ನೆನಪು”. ಮೊದಲು “ನಮ್ಮಮ್ಮ ಅಂದ್ರೆ ನನಗಿಷ್ಟ” ಓದಲು ಶುರು ಮಾಡಿದೆ. ಆಗ ನಾನು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಚೆಡ್ಡಿ ರಾಸ್ಕಲ್ ಅಂತ ಓದಿದ್ದೆ ತಡ ನಗಲು ಶುರು ಮಾಡಿದೆ. ಪಕ್ಕದಲ್ಲಿದ್ದ ಆಸಾಮಿ ನನ್ನನ್ನೇ ನೋಡತೊಡಗಿದ. ನಾನು ಮತ್ತೆ ಮತ್ತೆ ನಗಲು ಶುರು ಮಾಡಿದೆ. ಪಕ್ಕದ ಆಸಾಮಿ ನೋಡಿ ನುಮ್ಮನಾದ. ನಾನು ಇದೊಂದು ಹಾಸ್ಯ ಪ್ರಬಂಧ ಅಂತ ತಿಳಕೊಂಡು ಓಡತೊಡಗಿದೆ. ನಂತರ ಹಾಗೆ ಓದಿಕೊಂಡು ಹೋದಂತೆ ನನ್ನ ನಗು ಮಾಯವಾಯಿತು. ಮನಸ್ಸು ಗಂಭೀರವಾಯಿತು. ಹೃದಯ ಭರವಾಗತೊಡಗಿತು. ಗಂಟಲು ಬಿಗಿಯಾಯಿತು. ಕಣ್ಣುಗಳು ಗೊತ್ತಿಲ್ಲದೆ ತೇವಗೊಂಡಿದ್ದವು. ನನ್ನ ಪಕ್ಕದಲ್ಲಿದ್ದ ಆಸಾಮಿ ಕಡೆಗೆ ಒಮ್ಮೆ ನೋಡಿದೆ, ಅವನು ಕಣ್ಣು ಪಿಳಿ ಪಿಳಿ ಮಾಡಿ ನನ್ನನ್ನೇ ನೋಡುತ್ತಿದ್ದ. ಕೇಳಿಯೇ ಬಿಟ್ಟ “ಯಾಕೆ ಸರ್ ನಗುತ್ತಿದ್ದವರು ಒಮ್ಮೆಗೇ ಅಳಲು ಶುರು ಮಾಡಿದಿರಿ?” ನಾನು ಪುಸ್ತಕದ ಕಡೆಗೆ ಬೆರಳು ತೋರಿಸಿ ಸುಮ್ಮನಾದೆ. ಅವನು ಸುಮ್ಮನಾದ. ಅಮ್ಮನ ಬೆಲೆ ಏನು ಎಂಬುವುದನ್ನು ತಿಳಿದುಕೊಳ್ಳಲು ಈ ಪ್ರಬಂಧ ಓದಿದರೆ ಸಾಕು. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಅತ್ಯದ್ಭುತ!!! ಅಮ್ಮ ಸಾವಿರ ಸಲ ಮಗುವಿನ ಹೊಲಸು ತೆಗೆದು ತೊಳೆಯುತ್ತಾಳೆ ಆದರೆ ಅವಳ ಮುಪ್ಪಿನ ಕಾಲಕ್ಕೆ ಮಕ್ಕಳಾದ ನಾವು ಎಷ್ಟು ಜನ ಅಮ್ಮನಿಗೆ ಅಮ್ಮನಾಗಿ ಅವಳ ಸೇವೆ ಮಾಡುತ್ತೇವೆ? ಅವಳು ಅವತ್ತೇ ನಮ್ಮ ಹೊಲಸಿಗೆ ಹೇಸಿಗೆ ಪಟ್ಟುಕೊಂಡಿರುತ್ತಿದ್ದ್ರೆ ನಾವು ಈ ಮಟ್ಟಕ್ಕೆ ಬೆಳೆಯುತ್ತಿದ್ದ್ವೆ?

ಇನ್ನೂ “ವರ್ಣಮಯ” ಪುಸ್ತಕದಲ್ಲಿ ನನಗೆ ಹದಿನಾಲ್ಕು ಪ್ರಬಂಧಗಳಲ್ಲಿ ೧೩ ಪ್ರಬಂಧಗಳು ತುಂಬಾ ಇಷ್ಟವಾದವು. ಎಲ್ಲವೂ ಅದ್ಭುತ! ಒಂದಕ್ಕಿಂತ ಒಂದು ಮಿಗಿಲು ಚಂದ. ಆದರೆ “ಕುಂತಿ ಕರ್ಣರ ಪ್ರಸಂಗ” ನನಗೆ ಅಷ್ಟೊಂದು ತಲೆಗೆ ಹತ್ತಲಿಲ್ಲ. ಯಾಕೋ ಗೊತ್ತಿಲ್ಲ. ನೀವು ಹೆಸರಿಸಿರುವ ವೇದವ್ಯಾಸ, ಕುಮಾರವ್ಯಾಸ ಮತ್ತು ಭೈರಪ್ಪನವರ ಯಾವ ಪುಸ್ತಕವನ್ನು ನಾನು ಓದಿಲ್ಲ. ಬಹುಶಃ ಅದಕ್ಕೆ ನನಗೆ ತಲೆಗೆ ಅರ್ಥವಾಗಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಬೇಕು.

ಇಲ್ಲಿಯವರೆಗೂ ನಿಮ್ಮ ಅಮೂಲ್ಯ ಸಮಯವನ್ನು ನನ್ನ ಪತ್ರ ಓದಲು ವಿನಿಯೋಗಿಸಿದ್ದಕ್ಕೆ ತುಂಬಾ ಧನ್ಯವಾದಗಳು. ನಿಮ್ಮ ಮತ್ತೊಂದು ಪುಸ್ತಕ ಓದಿದ ಮೇಲೆ ಮತ್ತೆ ಪತ್ರ ಬರೆಯುವೆ.

ಇಂತಿ ನಿಮ್ಮ ಓದುಗ
ಅಮಿತ ಪಾಟೀಲ, ಆಲಗೂರು
೧೭-೧೦-೨೦೧೫
————————————————————————–
————————————————————————–

ವಸುಧೇಂದ್ರ ಅವರ ಉತ್ತರ:
————————
ಪ್ರಿಯ ಅಮಿತ್,

ಇಂತಹ ಪತ್ರಗಳು ನನ್ನನ್ನು ಜೀವಂತವಾಗಿ ಇರುವಂತೆ ನೋಡಿಕೊಳ್ಳುತ್ತವೆ. ಅತ್ಯಂತ ಪ್ರಾಮಾಣಿಕವಾದ ನಿಮ್ಮ ಪತ್ರ ಬಹಳ ಸಂತೋಷವನ್ನು ತಂದಿದೆ.

ನಿಮ್ಮ ಬಾಲ್ಯ ಮತ್ತು ನನ್ನ ಬಾಲ್ಯಕ್ಕೆ ಸಾಕಷ್ಟು ಹೋಲಿಕೆಯಿದೆ. ಪಿಯುಸಿ ಸೇರಿದ ನಂತರ ನನ್ನ ಸಾಹಿತ್ಯದ ಸಹವಾಸವೇ ನಿಂತು ಹೋಗಿತ್ತು. ಅನಂತರ ಐಟಿ ಸೇರಿದ ಮೂರು ವರ್ಷಗಳ ನಂತರ ಚಿಗುರತೊಡಗಿತು.

ಚುಕ್ಕು ಬುಕ್ಕು ಬಗ್ಗೆ ನೀವು ಬರೆದ ಸಂಗತಿ ವಿಶೇಷವಾಗಿದೆ. ಆದ್ದರಿಂದ ಅದರ ರುವಾರಿಯಾದ ಅಪಾರನೊಡನೆ ನಿಮ್ಮ ಇಮೇಲ್ ಹಂಚಿಕೊಂಡಿದ್ದೇನೆ.

ನನ್ನ ಪುಸ್ತಕಗಳೆರಡು ನಿಮ್ಮ ಮೇಲೆ ಪ್ರಭಾವ ಬೀರಿರುವುದು ಸಂತಸದ ಸಂಗತಿ. ಉಳಿದ ಪುಸ್ತಕಗಳನ್ನು ಓದಿ, ಅಭಿಪ್ರಾಯ ತಿಳಿಸಿ.

ವಂದನೆಗಳು,

ವಸುಧೇಂದ್ರ

ಯೇಗ್ದಾಗೆಲ್ಲಾ ಐತೆ – ಬೆಳಗೆರೆ ಕೃಷ್ಣಶಾಸ್ತ್ರಿಗಳು

ಇದು ಪುಸ್ತಕ ವಿಮರ್ಶೆ ಅಲ್ಲ. ಇದು ನನ್ನ ಓದಿನ ಅನುಭವ/ಅನಿಸಿಕೆ.
ಪುಸ್ತಕವನ್ನು ಬರೆದವರು ಬೆಳಗೆರೆ ಕೃಷ್ಣಶಾಸ್ತ್ರಿಗಳು. ಇವರ ಜೀವನ ಚರಿತ್ರೆ ಬಗ್ಗೆ ಗೊತ್ತಿಲ್ಲ ಆದರೆ ನನಗೆ ತಿಳಿದದ್ದು ಇವರು ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ, ಶಿಕ್ಷಕರು ಮತ್ತು ಯಾವಾಗಲೂ ಬಿಳಿಯ ಬಟ್ಟೆಗಳನ್ನು ತೋಡುತ್ತಿದ್ದರು.
ಇನ್ನು ಈ ಪುಸ್ತಕದ ಬಗ್ಗೆ ತುಂಬಾ ಕೇಳಿದ್ದೆ, ನೋಡಿದ್ದೆ ಆದರೆ ಓದಬೇಕೆಂದುಕೊಂಡಿರಲಿಲ್ಲ. ಬಹುಶಃ ಎರಡು ಕಾರಣಗಳಿರಬಹುದು: ೧. ಪುಸ್ತಕದ ಹೆಸರಿನ ಅರ್ಥ ಗೊತ್ತಿರಲಿಲ್ಲ. ೨. ಪುಸ್ತಕದ ಮುಖಪುಟ ನೋಡಿ ಇದು ಯಾವುದೋ ಮಠದ ಸ್ವಾಮಿಜಿಗಳ ಬಗ್ಗೆ ಹೋಗಳಿ ಬರೆದಿರಬಹುದು ಅಂತ ಅನ್ಕೊಂಡಿದ್ದೆ. ಒಮ್ಮೆ ಫೇಸ್‌ಬುಕ್‌ ನಲ್ಲಿ ಒಬ್ಬರು ಈ ಪುಸ್ತಕದ ವಿಮರ್ಶೆ ಬರೆದ್ದು ನೋಡಿದೆ. ಅಲ್ಲದೆ ವಿಮರ್ಶೆಗೆ ಬಂದ ಕಮೆಂಟುಗಳನ್ನು ಓದಿದೆ. ಬಹಳಷ್ಟು ಜನ ನಾಲ್ಕು ಸಾರಿ ಓದಿದ್ದಿನಿ, ಎಂಟು ಸಾರಿ ಓದಿದ್ದಿನಿ, ಸಮಯ ಸಿಕ್ಕಾಗಲೆಲ್ಲ ಓದುತ್ತಲೇ ಇರುತ್ತೆನೆ, ಇನ್ನು ಎಷ್ಟು ಸಾರಿ ಬೇಕಾದರೂ ಓದಬಹುದು ಅಂತೆಲ್ಲಾ ಬರೆದಿದ್ದರು. ಅದನ್ನು ಓದಿ ನನಗೂ ಓದಲೇಬೇಕೆನಿಸಿತು. ಓದುವ ತುಮುಲ ಇನ್ನೂ ಹೆಚ್ಚಾಯಿತು. ಪುಸ್ತಕವನ್ನು ಕೊಂಡುಕೊಂಡುಬಿಟ್ಟೆ. ಓದಲೂ ಕೈಗೆತ್ತಿದ್ದು ಆಯಿತು.
ಲೇಖಕರ ಮುನ್ನುಡಿ ಓದಿದ ಮೇಲೆ ಅರ್ಥವಾಗಿದ್ದು “ಯೇಗ್ದಾಗೆಲ್ಲಾ ಐತೆ” ಅಂದರೆ ” ಯೋಗದಲ್ಲಿ ಎಲ್ಲವೂ ಇದೆ”. ಇದು ಮುಕುಂದೂರು ಸ್ವಾಮಿಗಳನ್ನು ಕುರಿತು ಲೇಖಕರು ತಮ್ಮ ಒಡನಾಟ, ಮಾತುಕತೆ, ಹರಟೆ, ನಗು, ಪ್ರಯಾಣ ಮುಂತಾದವುಗಳ ನೆನಪುಗಳನ್ನು ಸುಂದರವಾಗಿ ಹೆಣೆದಿರುವ ಅದ್ಭುತ ಪುಸ್ತಕ. ಎಷ್ಟೊಂದು ಸುಂದರವಾಗಿ ಬರೆದಿದ್ದಾರೆ ಅಂದರೆ, ಇವರಿಬ್ಬರ ಜೋತೆ ನಾವೂ (ಓದುಗ) ಮೂರನೆಯ ವ್ಯಕಿಯಾಗಿ ಅವರ ಜೋತೆಗೆ ಇದ್ದೆವೆನೋ ಅಂತ ಅನ್ನಿಸುವುದು. ಅಂತಹ ಅದ್ಭುತ ಅನುಭವ ನೀಡುವುದು. ಲೇಖಕರು ನಮ್ಮನ್ನು ೬೦ ವರ್ಷಗಳ ಹಿಂದೆ ಕರೆದುಕೊಂಡು ಹೋಗುತ್ತಾರೆ. ಅಂದಿನ ಜನ ಜೀವನ, ಹಾವ ಭಾವ, ಊಟ, ವಸತಿ, ವ್ಯವಸಾಯ, ಹಳ್ಳಿ ಜೀವನ, ಪ್ರಕೃತಿ ಸೌಂದರ್ಯ ಎಲ್ಲವನ್ನೂ ಕಣ್ಣ ಮುಂದೆ ಕಟ್ಟಿದಂತೆ ಬರೆದಿದ್ದಾರೆ. ಇವತ್ತಿನ ಅವಸರದ ಮೆಕ್ಯಾನಿಕಲ್ ಲೈಫ್ ಬಿಟ್ಟು ೬೦ ವರ್ಷ ಹಿಂದಕ್ಕೆ ಹೋಗಬೇಕೆನಿಸುವಷ್ಟು ಇಷ್ಟವಾಗುತ್ತೆ.
ಮುಕುಂದೂರು ಸ್ವಾಮಿಗಳು ನನಗೆ ತುಂಬಾ ಅದ್ಭುತ ವ್ಯಕ್ತಿಗಳು ಅನ್ನಿಸಿದರು. ಇವತ್ತಿನ ಸ್ವಾಮಿಜಿಗಳಿಗೂ ಅವರಿಗೂ ಸಾವಿರ ಪಟ್ಟು ವ್ಯತ್ಯಾಸ ಉಂಟು. ಇವತ್ತಿನ ಸ್ವಾಮಿಗಳ ಮುಂದೆ ಮುಕುಂದೂರು ಸ್ವಾಮಿಗಳು ದೇವರಂತೆ ಕಂಡರು. ಅವರದು ಅಲೆಮಾರಿ ಜೀವನ, ಪ್ರತಿಯೊಬ್ಬ ಮನುಷ್ಯನನ್ನೂ ಕರೆದು ಮಾತನಾಡಿಸುತ್ತದ್ದರು, ಪ್ರತಿಯೊಂದು ಮರ ಗಿಡ ಕಲ್ಲು ಮಣ್ಣು ಹೂವು ಗಾಳಿ ನೀರು ಪ್ರಾಣಿ ಪಕ್ಷಿಗಳು ಹೀಗೆ ಎಲ್ಲದರ ಜೋತೆಗೂ ಮಾತನಾಡುತ್ತಿದ್ದರು. ಇಂತಹ ಸ್ವಾಮಿಗಳು ಎಲ್ಲಿ ಸಿಗುತ್ತಾರೆ ಹೇಳಿ. ಅವರ ಎಲ್ಲಾ ಮಾತುಗಳು ತಿಳಿಹಾಸ್ಯದಿದಂದಲೇ ಕೂಡಿರುತ್ತಿದ್ದು ಪ್ರತಿ ಮಾತಿನಲ್ಲಿ ಒಂದು ಅದ್ಭುತ ಜೀವನದ ಪಾಠವನ್ನು ಹೇಳಿಕೊಡುತ್ತಿದ್ದರು. ಅವರು ಹೇಳುವ ಪಾಠಗಳು ಅನಕ್ಷರಸ್ಥರಿಗೂ ಅರ್ಥವಾಗುವಂತೆ ಹೇಳುವ ರೀತಿ ಮಾತ್ರ ಬೆರುಗು ಹುಟ್ಟಿಸುವಂತದ್ದು. ಈ ಕೆಳಗಿನ ಸಾಲುಗಳನ್ನು ನೋಡಿ:
ಒಮ್ಮೆ ಮಾತಿನ ಮಧ್ಯೆ ಸ್ವಾಮಿಗಳು ಹೀಗೆಂದರು: “ಸಾವ್ಕಾರಂತಾವ ದುಡ್ಡಿರೋದು ಸನ್ಯಾಸಿತಾವ ಸಿದ್ಧಿ ಇರೋದು ಎಳ್ಡು ಒಂದೇ ಕಣೋ ಮಗ. ಅವ್ನಿಗೂ ಹಾಂಕಾರ ಬಿಟ್ಟಿಲ್ಲ ಇವ್ನಿಗೂ ಬಿಟ್ಟಿಲ್ಲ… ಏಸು ಖರ್ಚಾದವಲೇ ನಿನ್ನ ಮನೆತನ ನಿರ್ನಾಮ ಮಾಡ್ತಿನಿ ಅಂತಾನೆ ಸಾವ್ಕಾರ. ಒಂದು ಬಿರುಗಣ್ಣು ಬಿಟ್ಟು ನಿನ್ನ ಸುಟ್ಟು ಬಿಡ್ತೀನಿ ಅಂತಾನೆ ಸನ್ಯಾಸಿ. ಇಬ್ರಿಗೂ ಗರಾ (ಅಹಂಕಾರ) ಬಿಟ್ಟಿಲ್ಲ. ಗರಾ ಬಿಟ್ರೇನೆ ಗುರು ನೋಡಪ್ಪ”.
ಇನ್ನು ಸ್ವಾಮಿಗಳು ಪ್ರಕೃತಿಯ ಸೊಬಗನ್ನು ಹೇಗೆ ಆಸ್ವಾದಿಸುತ್ತಿದ್ದರೆಂದರೆ ಸ್ವತಃ ಬೆಳೆಗೆರೆ ಶಾಸ್ತ್ರೀಯವರು ಬೇರಗಾಗಿದ್ದಾರೆ. ಓದುಗ ಇವರಿಬ್ಬರ ಜೊತೆಗೆ ಮೂರನೆಯವನಾಗಿಬಿಡುತ್ತಾನೆ. ಈ ಕೆಳಗಿನ‌ ಇನ್ನೊಂದು ಸಾಲುಗಳು ಹೀಗಿವೆ:
” ಅಲಲಲಾಲ, ಅದು ನೋಡಪ್ಪಾ ಏನ್ ಸೊಗಸು! ಅಲ್ನೋಡು ಅವ್ನು ಎಂಥ ಬಣ್ಣ ಹಾಕ್ಕೊಂಡವ್ನೆ! ಎಲೆಲೇ, ಇವ್ನು ನೋಡಪ್ಪಾ ಆನೆ ಮುಖಾ! ಆಗೋ, ಅಲ್ನೋಡು ಇವನೆಲ್ಲೋ ಅರ್ಜೆಂಟಾಗಿ ಹೊಂಟವ್ನೆ! ಇಗೋ ಕುದುರೆ ಓಟ ಓಡುತ್ತ! (ನಗುತ್ತ ಆ ಮೋಡಗಳ ಬಣ್ಣ ಆಕಾರಗಳನ್ನು ವಿವರಿಸುತ್ತ) ಅಗೋ ಆ ಆನೆ ಮುಖದೋನು, ಆ ಕುದುರೆ! ಅವೆಲ್ಲೋದ್ವಪ್ಪಾ! ಇಂಗೇ ನೋಡು ಈಗ ಇದ್ದಿದ್ದು ಇನ್ನೊಂದು ಗಳಿಗಿಲ್ಲ. ಇಂಗೇ ಅಲ್ವೇ ಲೋಕ! ಇಂಥಾದ್ರಾಗೆ ನಾನೇ ಧೀರ. ನಂದೆ ಕೋಡು ಅಂತಾನೇ ಈ ಬಡ್ಡೀ ಮಗ”.
ಪುಸ್ತಕದ ತುಂಬೆಲ್ಲಾ ಇಂತಹ ಅದ್ಭುತ ಸಾಲುಗಳೇ ತುಂಬಿವೆ. ನಿಜಕ್ಕೂ ಅತ್ಯುತ್ತಮ ಪುಸ್ತಕ. ನೀವೂ ಒಮ್ಮೆ ಓದಿ. ಶುಭವಾಗಲಿ.

ಸ್ವತಂತ್ರವೆಂಬ ಬಿಳಿ ಆನೆ

expensive-freedom

ನಮ್ಮದೊಂದು ಮಧ್ಯಮ ವರ್ಗದ ಅವಿಭಕ್ತ ಕುಟುಂಬ. ಬಡವರಂತೂ ಅಲ್ಲ. ಚೆನ್ನಾಗಿ ಬಾಳಬಹುದಾದಂಥಹ ಸಂಪತ್ತು. ಆದರೆ ಮನೆಯ ಯಾರಲ್ಲಿಯೂ ಹೊಂದಾಣಿಕೆ ಇಲ್ಲ. ಎಲ್ಲರೂ ತಮಗೆ ತೋಚಿದ್ದು ಮಾಡುವವರು. ಸರಿಯಾದ ನಾಯಕತ್ವವಿಲ್ಲ. ಮನೆಯ ಯಜಮಾನನಿಲ್ಲ. ಒಂದು ವ್ಯವಸ್ಥೆ ಇಲ್ಲ. ಆದರೂ ಹಂಗೊ ಹಿಂಗೊ ಬದುಕುತ್ತಿದ್ದಾದಾರೆ. ಆಗ ಧಿಡೀರನೆ ನಿಮ್ಮ ಮನೆಯ ಮೇಲೆ ಒಬ್ಬ ಬಲಿಷ್ಟನು ದಾಳಿ ಮಾಡುತ್ತಾನೆ. ನಮ್ಮ ಸಂಪತ್ತಿನ ಮೇಲೆ ಹಕ್ಕು ಸ್ಥಾಪಿಸುತ್ತಾನೆ. ಎಲ್ಲವೂ ತನ್ನದೇ ಎಂದು ಸಾಧಿಸುತ್ತಾನೆ. ತನಗೆ ಹೇಗೆ ಬೇಕೋ ಹಾಗೆ ಉಪಯೋಗಿಸುತ್ತಾನೆ. ನಮ್ಮನ್ನೆಲ್ಲ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾನೆ. ಅವನು ಹೇಗೆ ಹೇಳುತ್ತಾನೋ ಹಾಗೆ ನಾವು ಕೇಳುವಂತೆ ಒತ್ತಡ ಹೇರುತ್ತಾನೆ. ದೌರ್ಜನ್ಯ ಎಸಗುತ್ತಾನೆ. ಹಿಂಸಿಸುತ್ತಾನೆ. ಹೊಡೆಯುತ್ತಾನೆ. ಅನ್ನವಿಲ್ಲದೆ ಮಲಗುವಂತೆ ಮಾಡುತ್ತಾನೆ. ಮನೆಯ ಎಲ್ಲ ಕೆಲಸಗಳನ್ನು ಮಾಡಿಸಿ ತಾನು ಆರಾಮವಾಗಿ ನೋಡಿ ಸುಖಿಸುತ್ತಾನೆ. ಇಷ್ಟೆಲ್ಲಾ ಅಟ್ಟಹಾಸ ನಡೆಸಿದರೂ ಅವನನ್ನು ನಾವು ಎನೂ ಮಾಡಲಾಗುತ್ತಿಲ್ಲ. ಅವನನ್ನು ಎದುರಿಸುವ ತಾಕತ್ತು ಇಲ್ಲವಾಗುತ್ತದೆ. ಅವನು ಕೇವಲ ಒಬ್ಬನಿದ್ದರೂ ನಾವೆಲ್ಲ ಅವನಿಗೆ ಎನನ್ನೂ ಮಾಡಲಾಗದ ಅಸಹಾಯಕತೆಯ ಅರಾಜಕತೆಯ ಸಾಕ್ಷಿ ಗಳಾಗಿ ಬಿಡುತ್ತವೆ. ಆವಾಗ ಮನೆಯಲ್ಲಿ ಒಬ್ಬ ಮಂಗಳ ಪಾಂಡೆ ಹುಟ್ಟಿಕೊಳ್ಳುತ್ತಾನೆ. ನಂತರ ಗೋಖಲೆ, ತಿಲಕ್, ಭಗತ್ ಸಿಂಗ್, ಆಜಾದ್, ಸಾವರ್ಕರ್, ಬೋಸ್, ಗಾಂಧೀಜಿ ಎಲ್ಲರೂ ಹುಟ್ಟಿಕೊಳ್ಳುತ್ತಾರೆ. ಎಲ್ಲರೂ ತಮ್ಮ ಬೆವರು ರಕ್ತ ಸುರಿಸಿ, ಪ್ರಾಣ ತ್ಯಾಗ ಮಾಡಿ ಮನೆಯಲ್ಲಿಯ ಮಾರಿಯನ್ನು ಕೊನೆಗೂ ಹೊರದಬ್ಬುತ್ತಾರೆ. ಆಗ ಆಗುವ ಸಂತಸ, ಹರ್ಷ,ಶಾಂತಿ, ನೆಮ್ಮದಿ, ಖುಷಿ ಅಳೆಯಲಾಗದು. ಅದುವೇ “ಸ್ವಾತಂತ್ರ್ಯ”. ಸ್ವಾತಂತ್ರ್ಯವನ್ನು ಒಂದು ವಾಕ್ಯದಲ್ಲೊ ಅಥವಾ ಒಂದು ಟಿಪ್ಪಣಿಯಲ್ಲೊ, ಒಂದು ಕಥೆಯಲ್ಲೊ, ಒಂದು ಉದಾಹರಣೆಯಲ್ಲೊ ವರ್ಣಿಸಲಾಗದು. ಅದು ಅನನ್ಯ, ಅನಂತ, ಅದಮ್ಯ, ಅಪೂರ್ವ, ಅಮೋಘ, ಅವರ್ಣೀಯ, ಅನೂಹ್ಯ. ಅದನ್ನು ಪಡೆದುಕೊಂಡ ನಾವೆಲ್ಲ ಧನ್ಯರು. ಇಂತಹ ಸ್ವಾತಂತ್ರ್ಯವನ್ನು ಅನುಭವಿಸಲು ಅದೆಷ್ಟೋ ಸ್ವಾತಂತ್ರ್ಯ ಸೆನಾನಿಗಳು ದೇಶ ಭಕ್ತರು ಆಗಸ್ಟ್ ೧೫ ೧೯೪೭ ರಲ್ಲಿ ಇರಲಿಲ್ಲ ಎಂಬುವುದು ವಿಷಾದದ ಸಂಗತಿ. ಕೆಲವೇ ಕೆಲವರು ಮಾತ್ರ ಅದರ ಸವಿಯುಂಡರು.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವುದೆಂದರೆ! ಅದು ಅಸಾಮಾನ್ಯ ದೇಶಭಕ್ತನಿಗೆ ಮಾತ್ರ ಸಾಧ್ಯ. ನಾವ್ಯಾರೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲಾರೆವು. ಅಷ್ಟು ಕೆಚ್ಚೆದೆ, ಗಟ್ಟಿತನ, ಇಚ್ಛಾ ಶಕ್ತಿ, ಅದಮ್ಯ ದೇಶಪ್ರೇಮ ಯಾವುದೂ ಇಲ್ಲ. ಈಗಿನ ಪರಿಸ್ಥಿತಿಯಲ್ಲಿ ಅವೆಲ್ಲ ಗುಣಗಳಿರುವುದು ನಮ್ಮ ಹೆಮ್ಮೆಯ ಸೈನಿಕರಲ್ಲಿ ಮಾತ್ರ. ಅವರೇ ನಮ್ಮ ದೇಶದ ವೀರ ಪುತ್ರರು. ನಮಗ್ಯಾರಿಗೂ ಅವರಷ್ಟು ದೇಶಪ್ರೇಮ ಹುಟ್ಟುವುದು ಸಂಶಯ. ಹುಟ್ಟಿದರೂ ದೇಶ ಕಾಯಲು ನಾವ್ಯಾರೂ ದೆಶದ ಗಡಿ ಕಾಯಲು ಹೋಗುವುದಿಲ್ಲ. ಸತ್ತರೆ ! ಎಂಬ ಭಯ. ಆದರೂ ನಾವು ದೇಶಪ್ರೇಮಿಗಳಲ್ಲ ಅಂತ ಹೇಳುವುದು ಸರಿಯಲ್ಲ. ದೇಶಪ್ರೇಮವೆಂದರೆ ಬರಿ ದೇಶಕ್ಕೆ ಪ್ರಾಣ ತ್ಯಾಗ ಮಾಡುವುದಲ್ಲ. ಅದು ದೇಶಪ್ರೇಮದ ಒಂದು ಅತ್ಯುನ್ನತವಾದ ದಾರಿ. ಆದರೆ ದೇಶಪ್ರೇಮ ತೋರಿಸಲು ಇನ್ನೂ ನೂರಾರು ದಾರಿಗಳಿವೆ. ನಾವು ನಮ್ಮ ಸಂವಿಧಾನದ ನ್ಯಾಯ ಪಾಲನೆ ಮಾಡಿದರೆ ಸಾಕು ದೇಶ ಸೇವೆ ಮಾಡಿದಂತೆಯೇ. ಎಲ್ಲ ನಾಗರೀಕರು ನಾಗರೀಕತ್ವ ಪಾಲನೆ ಮಾಡಿದರೆ ಸಾಕು. ಅದುವೇ ದೇಶಪ್ರೇಮ. ನಿಮ್ಮ ಪ್ರೀತಿಯ ಪಾತ್ರರಾದ ತಂದೆ, ತಾಯಿ, ಹೆಂಡತಿ, ಮಕ್ಕಳು, ಅಕ್ಕ, ತಂಗಿ, ಅಣ್ಣ ತಮ್ಮರನ್ನು ಹೇಗೆ ನೀವು ಪ್ರೀತಿಸುತ್ತಿರೋ, ಗೌರವಿಸುತ್ತಿರೋ, ನೋಡಿಕೊಳ್ಳುತ್ತಿರೋ ಹಾಗೆಯೇ ನಿಮ್ಮ ತಾಯಿನೆಲವನ್ನು ನೋಡಿಕೊಳ್ಳಿ. ಅದುವೇ ದೇಶಪ್ರೇಮ. ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಡಿ. ಎಲ್ಲರಲ್ಲೂ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಿ. ಸರಕಾರದ ನಿಯಮಗಳನ್ನು ಸರಿಯಾಗಿ ಪಾಲಿಸಿ. ಎಲ್ಲ ಧರ್ಮಿಯರನ್ನು ಸಮಾನರಂತೆ ಕಾಣಿ. ಬಡವರಿಗೆ ಸಹಾಯ ಮಾಡಿ. ಪರಿಸರವನ್ನು ಕಾಪಾಡಿ. ದೇಶದ ಬಗ್ಗೆ ಜಾಗೃತಿ ಮೂಡಿಸಿ. ಮಕ್ಕಳಲ್ಲಿ ದೇಶಾಭಿಮಾನ, ಪ್ರೀತಿ, ಹೆಮ್ಮೆ ಮೂಡುವಂತೆ ಮಾಡಿ. ಸ್ವಾಭಿಮಾನದಿಂದ, ನ್ಯಾಯಯುತವಾಗಿ ದುಡುದು ತಿನ್ನಿ. ಇನ್ನೂ ನೂರಾರು ದಾರಿಗಳಿವೆ. ಆದರೆ ದೇಶದ ಈಗಿನ ಪರಿಸ್ಥಿತಿಯನ್ನು ನೆನೆಸಿಕೊಂಡರೆ ನಡುಕ ಹುಟ್ಟುವುದಂತೂ ಸತ್ಯ.
ಮನೆಯ ಎಲ್ಲ ಹಿರಿಯರು ಹೇಗೊ ಬಲಿಷ್ಠ ರಾಕ್ಷಸನ್ನು ಹೊರದಬ್ಬಿದ್ದಾಯಿತು. ಮತ್ತೆ ಎಲ್ಲ ಸಂಪತ್ತಿನ ಮೇಲೆ ಹಕ್ಕು ವಾಪಸ್ ಪಡೆದ್ದಾಯಿತು. ಇಷ್ಟೇಲ್ಲ ಗಳಿಸಲು ಎಷ್ಟೋ ಜನ ಪ್ರಾಣ ತ್ಯಾಗ ಮಾಡಬೇಕಾಯಿತು. ಈಗ ಮನೆಯಲ್ಲಿ ಉಳಿದಿರುವವರು ಅವರ ಮಕ್ಕಳು ಮತ್ತು ಮೊಮ್ಮಕ್ಕಳು. ಇವರುಗಳಲ್ಲಿ ಸಶಕ್ತರು, ಬಲಿಷ್ಟರು, ದೊಡ್ಡವರು, ಹಿರಿಯರು ಮನೆಯ ಯಜಮಾನಿಕೆಯನ್ನು ನೋಡಿಕೊಳ್ಳಬೇಕಲ್ಲವೇ. ಇವರೇಲ್ಲ ನಮ್ಮ ಪೂರ್ವಜರು ಹಾಕಿಕೊಟ್ಟ ಮೌಲ್ಯಗಳನ್ನು ಅನುಸರಿಸಿಕೊಂಡು ಮುಂದೆ ಸಾಗಬೇಕಲ್ಲವೇ. ಕನಿಷ್ಟಪಕ್ಷ ಇದ್ದದ್ದನ್ನು ಉಳಿಸಿಕೊಂಡು ಹೋಗಬೆಕಲ್ಲವೇ. ಆದರೆ ಆದದ್ದೇ ಬೇರೆ! ಎಂದು ರಾಜಕೀಯ, ರಾಜಕಾರಣ, ರಾಜಕಾರಣಿ ಎಂಬುದು ಶುರುವಾಯಿತೋ ಅಂದೇ ಮುಗಿಯಿತು ದೇಶದ ಭವಿಷ್ಯ. ಯಾವ ಅಸ್ತ್ರವನ್ನು ನಾವು ದೇಶದ ಭವಿಷ್ಯವನ್ನು ರೂಪಿಸಲು ಉಪಯೋಗಿಸಬೇಕೋ ಅದೇ ಅಸ್ತ್ರವನ್ನು ದೇಶದ ಭವಿಷ್ಯವನ್ನು ಹಾಳುಗೆಡವಲು ಉಪಯೋಗಿಸಲಾಯಿತು. ಸ್ವಾರ್ಥ, ಅಧಿಕಾರದ ಲೋಭ, ಅಹಂಕಾರ, ಹಣದಾಶೆ, ಭ್ರಷ್ಟಾಚಾರ, ಲಂಚ, ಜ್ಯಾತೀಯತೆ,ಅಸಮಾನತೆ ಹೀಗೆ ಎಲ್ಲ ಅನಿಷ್ಟಗಳೂ ರಾಜಕಾರಣದ ತಳಹದಿಯಲ್ಲಿ ಸೇರಿಕೊಂಡವು. ನಮಗೆ ಸ್ವಾತಂತ್ರ್ಯ ಯಾವ ಉದ್ದೇಶಕ್ಕಾಗಿ ಸಿಕ್ಕಿತು? ಹೇಗೆ ಸಿಕ್ಕಿತು? ಅದನ್ನು ಪಡೆಯಲು ಎಷ್ಟೋಂದು ವರ್ಷಗಳು ಬೇಕಾದವು? ಎಷ್ಟು ಜನರ ರಕ್ತದ ಕಾಲುವೆ ಹರಿಯಿತು? ಎಷ್ಟು ಜನರು ಪ್ರಾಣ ಕಳೆದುಕೊಂಡರು? ಎಷ್ಟು ಜನ ತಮ್ಮ ವೈಯಕ್ತಿಕ ಜೀವನವನ್ನು ಕಳೆದುಕೊಂಡರು? ಎಷ್ಟು ಜನ ತಮ್ಮ ದೇಹದ ಅಂಗಾಂಗಗಳನ್ನು ಕಳೆದುಕೊಂಡರು? ಎಷ್ಟು ಜನ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡರು? ಎಷ್ಟು ಜನ ತಮ್ಮ ಉದ್ಯೋಗವನ್ನು ಕಳೆದುಕೊಂಡರು? ಎಷ್ಟು ಜನ ತಮ್ಮ ಹೆಣ್ಣು ಮಕ್ಕಳ ಮರ್ಯಾದೆ ಕಳೆದುಕೊಂಡರು? ಎಷ್ಟು ಜನ ಅನ್ನ ನೀರು ಸಿಗದೆ ಪ್ರಾಣ ಬಿಟ್ಟರು? ಈ ಮೇಲಿನ ಎಲ್ಲ ಪ್ರಶ್ನೆಗಳನ್ನು ನಮ್ಮ ರಾಜಕಾರಣಿಗಳು ಮರೆತೇ ಹೋದರು! ಅವರನ್ನು ಕಾಡಿದ ಒಂದೇ ಒಂದು ಪ್ರಶ್ನೆ ದೇಶದ ಸಂಪತ್ತನ್ನು ಹೇಗೆ ಕಬಳಿಸುವುದು??? ಅದೆಲ್ಲವುಗಳ ಪರಿಣಾಮವೇ ಈಗಿನ ಸ್ವತಂತ್ರ ಭಾರತ. ಸ್ವತಂತ್ರ್ಯ ಸಿಕ್ಕು ೭೦ ವರ್ಷಗಳಾದರೂ ಇನ್ನೂ ಸಾವಿರಾರು ಹಳ್ಳಿಗಳಲ್ಲಿ ಟಾರ್ ರಸ್ತೆಗಳಿಲ್ಲ, ವಿದ್ಯುತ್ ಇಲ್ಲ, ಉತ್ತಮ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಶಾಲೆಗಳಿಲ್ಲ. ೭೦ ವರ್ಷಗಳಾದರೂ ಇನ್ನೂ ನಾವು ೧೦೦℅ ಸಾಕ್ಷರತೆ ಇಲ್ಲ ಎಂಬುದೇ ನಾಚಿಕೆಗೇಡು. ಬಡವನು ಬಡವನಾಗಿಯೇ ಸಾಯುತ್ತಿದ್ದಾನೆ. ಶ್ರೀಮಂತನು ಇನ್ನೂ ಹೆಚ್ಚಿನ ಶ್ರೀಮಂತನಾಗಿ ಮೆರೆಯುತ್ತಿದ್ದಾನೆ. ೭೦ ವರ್ಷಗಳಾದರೂ ಇನ್ನೂ ಒಬ್ಬ ಬಡವನಿಗೆ ಒಂದು ಪ್ರಾಥಮಿಕ ಆರೋಗ್ಯ ಸೇವೆಯೂ ದೊರಕದೆ ಸತ್ತು ಹೆಣವಾಗುತ್ತಿದ್ದಾನೆಂದರೆ ನಿಜಕ್ಕೂ ಭಯಪಡಬೇಕಾದ ವಿಷಯ. ೭೦ ವರ್ಷಗಳಾದರೂ ನಮಗೆಲ್ಲ ಅನ್ನ ಹಾಕೊ ಅನ್ನದಾತ ರೈತ ತನ್ನ ಸ್ವಂತ ಹೊಟ್ಟೆ ತುಂಬಿಸಿಕ್ಕೊಳ್ಳಲಾರದೇ ನೇಣಿಗೆ ಶರಣಾಗುತ್ತಿದ್ದಾನೆಂದರೆ ಅದೆಂತ ದುಸ್ಥಿತಿ ಬಂದಿದಗಿರಬೇಕು ದೇಶಕ್ಕೆ!!! ನನಗೆ ನೆನಪಿರುವಂತೆ ೨೦ ವರ್ಷಗಳ ಹಿಂದೆ ಕೇಳಿದ ರಾಜಕಾರಣಿಗಳ ಅಭಿವೃದ್ಧಿ ಯೋಜನೆಗಳ ಭಾಷಣಕ್ಕೂ ಮತ್ತು ಈಗಿನ ಅಭಿವೃದ್ಧಿ ಯೋಜನೆಗಳ ಭಾಷಣಕ್ಕೂ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗದೇ ಹೋಯಿತು. ಕೂಲಿ ಮಾಡುವವನ ಕೈಯಲ್ಲಿ ಮೊಬೈಲ್ ಬಂದಿದೆಯೆ ಹೊರತು ಅವನು ಇನ್ನು ಒಂದೇ ಹೊತ್ತು ಊಟ ಮಾತ್ರ ಮಾಡುತ್ತಾನೆ. ತಪ್ಪು ಬರಿ ರಾಜಕಾರಣಿಗಳದ್ದಲ್ಲ, ಕೂಲಿಯವನದೂ ತಪ್ಪಿದೆ. ಅವನಿಗೆ ಒಂದು ಹೊತ್ತು ಊಟ ಮಾಡದೆ ಹೊದರೆ ಪರವಾಗಿಲ್ಲ ಆದರೆ ಮೊಬೈಲಿನಲ್ಲಿ ಇಂಟರ್ನೆಟ್ ಬೇಕೆ ಬೇಕು! ಇಂಥಹ ಪರಿಸ್ಥಿತಿ ಬಂದಿದೆ. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ, ಉದ್ಯೋಗ ಸೃಷ್ಟಿ ಮಾಡಿ ಜನರನ್ನು ಸ್ವಾವಲಂಬಿ ಹಾಗೂ ಸ್ವಾಭಿಮಾನಿಗಳನ್ನಾಗಿಸುವ ಬದಲು ೧ ರುಪಾಯಿಗೆ ೧ ಕೆಜಿ ಅಕ್ಕಿ ಕೊಟ್ಟು, ಈಗಾಗಲೇ ಉದ್ಯೋಗದಲ್ಲಿರುವವರು ಉದ್ಯೋಗ ಬಿಡುವಂತೆ ಪ್ರೇರೆಪಿಸುತಿರುವ ರಾಜಕಾರಣಿಗಳಿರುವಾಗ ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡಿ ಏನು ಪ್ರಯೋಜನ? ಮಕ್ಕಳಲ್ಲಿ ರಾಷ್ಟ್ರ ಭಕ್ತಿ ಬದಲು ರಾಷ್ಟ್ರ ವಿರೋಧಿ ಭಾವನೆಗಳನ್ನು ತುಂಬಲಾಗುತ್ತಿದೆ. ಜ್ಯಾತ್ಯಾತೀತತೆಯ ಬಗ್ಗೆ ತಿಳಿಸುವ ಬದಲು ಜ್ಯಾತೀಯತೆಯನ್ನು ಹೇರಲಾಗುತ್ತಿದೆ. ದೇಶಭಕ್ತಿಗೀತೆಗಳನ್ನು ಹಾಡಬೇಕಿರುವ ಮಕ್ಕಳು ದೇಶ ವಿರೋಧಿ ಘೋಷಣೆಯನ್ನು ಕೂಗುವಂತಾಗಿದೆ ನಮ್ಮ ದೇಶದ ಪರಿಸ್ಥಿತಿ. ನಮಗೆ ನಮ್ಮ ಮನೆಯನ್ನು ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲವಾಗಿದೆ. ಇಂಥದ್ದರಲ್ಲಿ ದೇಶದ ಬಗ್ಗೆ ಚಿಂತಿಸುವ ಮನಸ್ಸು ಹುಡುಕುವುದು ಕಷ್ಟ.
ಕೊನೆಯ ಮಾತು, ಮನುಷ್ಯನ ಅತ್ಯಂತ ದುರಂತ ಸ್ಥಿತಿ, ದಾರುಣ ಸ್ಥಿತಿ, ದೌರ್ಭಾಗ್ಯ ಸ್ಥಿತಿ, ಕೆಟ್ಟ ಸ್ಥಿತಿ ಅಂದರೆ ಅದು “ಸಾವು”. ಅದನ್ನು ಯಾರೂ ಕೂಡ ಆಪೇಕ್ಷಿಸಲಾರ. ಯಾವ ಪ್ರಾಣಿ, ಪಕ್ಷಿ ಅಥವಾ ಭೂಮಿಯ ಮೇಲಿನ ಯಾವ ಜೀವಿಯೂ ಈ ಸ್ಥಿತಿಯನ್ನು ಇಚ್ಛಿಸಲಾರವು. ಅಂಥಹ ಸ್ಥಿತಿಯನ್ನು ತಾನಾಗಿಯೇ ಆಹ್ವಾನಿಸಿಕೊಂಡ ಸ್ವಾತಂತ್ರ್ಯ ಹೋರಾಟಗಾರರು, ದೇಶದ ಗಡಿ ಕಾಯುವ ಸೈನಿಕರು ಮತ್ತು ಇನ್ನು ಇತರ ಅನೇಕ ದೇಶ ಭಕ್ತರು ಅದೆಂಥ ಅದ್ಭುತ, ಶ್ರೇಷ್ಠ, ತ್ಯಾಗಮಯಿ ಜೀವಿಗಳು ಎಂಬುದು ನಮಗೆ ಮನವರಿಕೆಯಾದರೆ ಸಾಕು, ದೇಶಕ್ಕಾಗಿ ನಾವೂ ಏನಾದರೂ ಮಾಡಬೇಕೆನಿಸುವುದಂತು ಸತ್ಯ. ಅಲ್ಲಿಗೆ ನಾವು ನಮ್ಮ ತಾಯಿ ನೆಲದ ಋಣ ತೀರಿಸಲು ಸಜ್ಜಾದಂತೆ.
ಜೈ ಹಿಂದ್ ಜೈ ಭಾರತ್.

– ಅಮಿತ ಪಾಟೀಲ
೧೫-ಅಗಸ್ಟ-೨೦೧೬