ಮುತ್ತು

wallpapers-1366x768

ಹಾಲು ಮುತ್ತೊಂದು ಅಳುತ್ತಿತ್ತು
ಸಾಗರದ ಕಿನಾರೆಯ ಕಪ್ಪು ಉಸುಕಿನಲಿ

ಕಣ್ಣೊರೆಸಿದೆ, ಮುತ್ತೇ ಅಳುವೆ ಏಕೆ?
ನಿನಗ್ಯಾರು ಹಾಲುಗೆನ್ನೆಗೆ ಮುತ್ತಿಟ್ಟಿಲ್ಲವೇ?

ಮುತ್ತು ನಾಚಿ ನೀರಾಯಿತು
ಸಾಗರದೊಳಗೆ ಹರಿದು ಲೀನವಾಯಿತು

ಸಾಗರದೆಡೆಗೆ ನೋಡಿದೆ ಒಮ್ಮೆ
ಅಲೆಗಳು ಕಾಲಿಗಪ್ಪಳಿಸಿ ಮುತ್ತಿಟ್ಟವು

ಕಾಲುಗಳನ್ನೊಮ್ಮೆ ನೋಡಿಕೊಂಡೆ
ನೊರೆಯು ಲಿಪ್ಸಟಿಕ್ ತರ ಬೆರಳುಗಳಿಗೆ ಮೆತ್ತಿಕೊಂಡಿತ್ತು

ನಾನು ನಾಚಿ ನಕ್ಕೆ ಅಷ್ಟೇ…

– ಅಮಿತ ಪಾಟೀಲ, ಆಲಗೂರ
೨೬-೧೨-೨೦೧೬

ಕವಿಯ ಕ್ಷಣಗಳು

​ಮಂಜು ಅಪ್ಪಿಕೊಂಡ
ಮುಂಜಾವಿನ ಮುಸುಕಿನಲಿ
ಮಂಜಿಗೆ ಮುದ್ದಿಟ್ಟವು
ಭಾನುವಿನ ಬಾಣಗಳು|

ಭಾನುವಿನ ಬಾಣಗಳ
ಬಿಸಿ ತಾಳಲಾರದೆ
ಎಲೆ-ಹುಲ್ಲುಗಳ ತಳಕ್ಕೆ
ಜಾರಿದವು ಮಂಜು ಕಣಗಳು|

ಮುಂಜಾವಿನ ಸುಪ್ರಭಾತದ
ಇಂಪಾದ ಸ್ವರ ಸಮ್ಮೇಳನ
ಏರ್ಪಡಿಸಿದವು ಹಕ್ಕಿಗಳ
ನೂರಾರು ಬಣ್ಣದ ಬಣಗಳು|

ಹೂವಿನಿಂದ ಹೂವಿಗೆ
ಹಾರಿ ಪರಾಗ ಕಣಗಳನ್ನು
ಪೂರೈಸಿದವು ಝೇಂಕರಿಸುವ
ಮುದ್ದು ಮಧುವಣಗಿತ್ತಿಗಳು|

ವರ್ಣರಂಜಿತ ಕವಿತೆ
ಗೀಚಲು ಕವಿಯನ್ನು ಅಪ್ಪಿ
ಮುದ್ದಿಟ್ಟವು ಈ ಮುಂಜಾವಿನ
ಸುಮಧುರ ಕ್ಷಣಗಳು|

– ಅಮಿತ ಪಾಟೀಲ, ಆಲಗೂರ
೮-೧೨-೨೦೧೬

ಮನಮೋಹಿನಿ

ಯಾವ ಮೋಹಿನಿಯೋ ನೀನು ಅರಿಯೆನು
ನಯನದಾಶೆಯ ಪೂರೈಸಬೆಕೆಂದಾಗ
ನಿನ್ನ ಒಂದು ಅಣುವೂ ಸಹ ಕಾಣದು
ಆಶೆ ಉಕ್ಕಿ ಉಕ್ಕಿ ಆರಿಹೋದಾಗ
ಮಿಂಚು ಹುಳದಂತೆ ಕಣ್ಣೆದುರಿಗೆ ಬಂದು
ಮಿಂಚಿ ಮಾಯವಾದಾಗ
ಆ ಅರೆ ಕ್ಷಣಗಳನ್ನೇ ನಾ ನೆನೆದು ನೆನೆದು
ಕಣ್ಣಲ್ಲೇ ಛಾಯಾಗ್ರಹಿಸಿ
ವರುಷಗಟ್ಟಲೆ ಮೆಲುಕು ಹಾಕಿ ಸುಖಿಸುವೆ.

ಒಂದೊಂದು ಸಾರಿ ನೀ
ಜಿಟಿ ಜಿಟಿ ಸೊನೆ ಮಳೆಯಂತೆ ಕಾಡಿ
ಸುಮ್ಮಸುಮ್ಮನೆ ಸುರಿದು ಚಳಿಯುಂಟುಮಾಡಿ
ಬೆಚ್ಚನೆಯ ನೆಮ್ಮದಿಯ ನಿದ್ರೆ ನೀಡಿ
ಕನಸಿನಲ್ಲಿಳಿದು ಶೃಂಗಾರ ಕಾವ್ಯ ಹಾಡಿ
ಪ್ರೀತಿಯ ಹಚ್ಚೆ ಚುಚ್ಚುವೆ ಹೃದಯದಡಿ.

ಭೂಮಿಯೇ ವಶವಾದಹಾಗೆ, ಸೂರ್ಯನಿಗಾಗಿ
ನೀನು ನನ್ನ ವಶವಾಗಲು ಪ್ರೀತಿಗಾಗಿ
ಕಲಿಯುತ್ತಿರುವೆ ಸಮ್ಮೋಹಿನಿ ವಿದ್ಯೆ ನಿನಗಾಗಿ
ನಂಬಿಕೆಯನ್ನು ನಂಬು ನೀ ನನಗಾಗಿ
ನೀ ನನ್ನೊಳ ಹೊಕ್ಕು ಬಾ ಅಮೃತಧಾರೆಯಾಗಿ
ನಮ್ಮಿಬ್ಬರ ಪ್ರೀತಿಯ ಕಡಲಲ್ಲಿ ನಿರಂತರವಾಗಿ
ಬರಿ ಪ್ರೀತಿಗಾಗಿ.. ಪ್ರೀತಿಗಾಗಿ.. ಪ್ರೀತಿಗಾಗಿ…

– ಅಮಿತ ಪಾಟೀಲ, ಆಲಗೂರ

೦೫-೧೧-೨೦೧೬

ಅಮೃತವರ್ಷಿಣಿ

ಸಮ್ಮೋಹಿನಿ ನೀ
ಸಮ್ಮೋಹಿನಿ

ಸಕಲವಿದ್ಯಾ
ಸಂಪನ್ನ
ಸೌಂದರ್ಯ
ಸ್ವರೂಪಿಣಿ

ಸುಮಧುರ
ರಾಣಿ
ಸಂಗೀತ
ಗಾನವಾಣಿ

ಪ್ರಖರತೆಯ
ಕಿರಣಜನ್ಯ
ಮಣಿ

ಅಮೃತರಸಧಾರಿಣಿ
ಹೃದಯವಂತಿಕೆಯ
ಮಂದಾಕಿನಿ

ಸುಕೋಮಲ
ಹೃದಯಸ್ಪರ್ಷಿಣಿ
ನೀ ನನ್ನ
ಅಮೃತವರ್ಷಿಣಿ.

– ಅಮಿತ ಪಾಟೀಲ, ಆಲಗೂರ
೦೪-೧೧-೨೦೧೬

ಸೀಮೆಯಾಚೆ ಸುಂದರಿಗೆ…

seeme_yache_sundari

ಸೀಮೆಯಾಚೆ ಸುಂದರಿಯೇ!

ಮಧುಗಿಂತಲೂ ಸಿಹಿ
ಹೀರಿ ನೋಡ ಈ ಕನ್ನಡ !

ಕೋಗಿಲೆಗಿಂತಲೂ ಮಧುರ
ಬಾರ ಕನ್ನಡದಲ್ಲೊಮ್ಮೆ ಹಾಡ !

ಚಿನ್ನಕ್ಕಿಂತಲೂ ಪರಮ
ಕನ್ನಡದಲ್ಲೊಮ್ಮೆ ಮಾತಾಡ !

ಹಾಲಿಗಿಂತಲೂ ಶುಧ್ಧ
ಓದಿದರ ದೂರ ನಿನ್ನ ದುಗುಡ !

ಪ್ರಕೃತಿಯ ಮಹಾರಾಜ
ನೋಡಬಾರ ನಮ್ಮ ಮಲೆನಾಡ !

ಸುವಾಸನೆಗೆ ಸವಾಲು
ಕನ್ನಡಿಗರ ಹೆಮ್ಮೆ ಶ್ರೀಗಂಧ ಗಿಡ !

ಕಲ್ಲಿನಲ್ಲಿ ಜೀವವಿರುವ
ಶೃಂಗಾರ ಶಿಲ್ಪಕಲಾ ಬೀಡ !

ಮುಗಿಯದ ಐಶ್ವರ್ಯ
ಕನ್ನಡ ಯಾವಾಗಲೂ ತುಂಬಿದ ಕೊಡ !

ಬಲಗಾಲಿಟ್ಟು ಒಳಗೆ ಬಾರ
ನಾಚಿ ಹೊರ ನಿಲ್ಲಬೇಡ !

ನೀ ಎಂದೂ ಮರೆಯಲಾಗದ
ಈ ಕಸ್ತೂರಿ ಕನ್ನಡ ಚಂದನದ ಬೀಡ.

– ಅಮಿತ ಪಾಟೀಲ, ಆಲಗೂರ
೧-೧೧-೨೦೧೬

ಮಳೆಯ ಮೇಳ

boy_at_rain

ಬಿಸಿಲಿಗೆ ಬಾಯ್ಬಿಟ್ಟ
ಭೂಮಿಗೆ ಸಂಜಿವಿನಿಯಾಗಿ
ಸೂರ್ಯನೆದುರು ಸಮರ ಹೂಡಿ
ಮೋಡದೊಳಗೆ ಮುಸುಕು ಹಾಕಿ
ಬಿಸಿಲಿಗೇ ಬರೆ ಎಳೆದು
ಹನಿಯ ಮೇಲೆ ಹನಿ ಹನಿಯಾಗಿ
ಪರೇಡ್ ನಡೆಸುವ ಸೈನಿಕರಂತೆ
ರಭಸವಾಗಿ ಧೂಳಿನ ಕೆನ್ನೆ ಕಚ್ಚಿ
ಧೋ ಧೋ ಎಂದು ಧೂಳಿನ ಹೋಳಿಯಾಡಿ
ಮಣ್ಣಿನ ಸುವಾಸನೆಯ ಘಂ ಎಬ್ಬಿಸಿ
ಚಟಪಟ ನಾದವನ್ನು ಎಡೆಬಿಡದೆ ಗುನುಗಿ
ಜಲಧಾರೆಯ ಓಕುಳಿಯಾಡುವ
ಈ ಮಳೆಯ ಮರ್ಮವೇನು?

ಮಳೆಯ ನೋಡಿದ ಮಗು
ಹಿಗ್ಗಿ ಹೀರೇಕಾಯಿಯಾಗಿ
ಹರಿವ ಕೆಮ್ಮಣ್ಣ ನೀರಿಗೆ ಹಾರಿ
ಅದರೊಟ್ಟಿಗೆ ಹರಿದಾಡಿ ಕುಣಿದಾಡಿ
ಕುಪ್ಪಳಿಸಿ ಕೂಗಿ ಕೆಸರಲ್ಲಿ ಒದ್ದಾಡಿ
ಬಡಿದಾಡಿ ಕೊಳೆಮಾಡಿ
ಅಮ್ಮ ಬೈದಾಗ
ತಿನಿಕಾಡಿ ಪರದಾಡಿ ಬೆದರಿ ಕುಗ್ಗಿ
ಮೆಟ್ಟಿಲೇರಿ ಮನೆಯೊಳು ನುಗ್ಗಿ
ಮೂಲೆ ಸೇರಿ ಮರೆಯಲ್ಲಿ ಅಡಗುವ ಕಲೆ ಎಂಥದು?

ಮರುದಿನವೇ ಮೂಗಿನಲ್ಲಿ ದೊಡ್ಡಾಟ
ಗಂಟಲಲ್ಲಿ ಬಯಲಾಟ
ಎದೆಯಲ್ಲಿ ಡೊಂಬರಾಟ
ಕಣ್ಣಲ್ಲಿ ಕೋಲಾಟ
ತಲೆಯಲ್ಲಿ ನಗಾರಿಯಾಟ
ವೈದ್ಯನಿಂದ ಚುಚ್ಚಾಟ
ಅಮ್ಮನಿಂದ ಗೊಣಗಾಟ
ಅಪ್ಪನಿಂದ ಬಡಿದಾಟ
ಪಾಪ! ಮಗುವಿಗೆ ಎಲ್ಲಿಲ್ಲದ ಉರಿಯಾಟ
ನೆಗಡಿಗೆ ಕೆಮ್ಮಿಗೆ ತಲೆನೋವಿಗೆ
ಎದೆನೋವಿಗೆ ಕಣ್ಣುರಿಗೆ ಯಮರಾಜನ ಪಟ್ಟ
ಈ ‘ಆಟ’ಗಳು ಎಷ್ಟು ಭಯಂಕರ?

ಮಗು ಇಂಗು ತಿಂದ
ಮಂಗನಂತೆ ಮುಖಮಾಡಿ
ವೈದ್ಯ ಕೊಟ್ಟ ಕಹಿಗುಳಿಗೆ
ನುಂಗಿ ನಿರು ಕುಡಿದು
ಚಳಿಗೆ ಹೆದರಿ
ಹಾಸಿಗೆಯ ಗೂಡು ಸೇರಿ
ಬೆಚ್ಚನೆಯ ಹೊದಿಕೆ ಹೊತ್ತು
ಮನದಲ್ಲಿ ಕನಸು ಬಿತ್ತಿ
ಕಲ್ಪನೆಗೆ ಕೀಲಿ ಕೊಟ್ಟು
ಸಿಹಿನಿದ್ರೆಗೆ ಜಾರಿಕೊಳ್ಳುವ ಸುಮಧುರ ಸೂತ್ರವೇನು?

– ಅಮಿತ ಪಾಟೀಲ, ಆಲಗೂರ

ಪ್ರೇಮಾನುಭವ

baby-smile

ಅರಳುವ ಹೂವಿನ
ನರ್ತನ ದೃಶ್ಯವ
ನೋಡಿದ ಕ್ಷಣವೇ
ಅರಳುವುದು ಪ್ರೇಮ |

ಹುಟ್ಟಿದ ಮಗುವಿನ
ಪುಟ್ಟ ನಗುವನು
ನೋಡಿದ ಕ್ಷಣವೇ
ಹುಟ್ಟುವುದು ಪ್ರೇಮ|

ಚಿಗುರಿನ ಚೈತ್ರದ
ಹಚ್ಚ ಹಸಿರನು
ನೋಡಿದ ಕ್ಷಣವೇ
ಚಿಗುರುವುದು ಪ್ರೇಮ|

ಉದಯಿಸುವ ರವಿಯ
ರಮ್ಯ ನೋಟವ
ನೋಡಿದ ಕ್ಷಣವೇ
ಉದಯಿಸುವುದು ಪ್ರೇಮ|

ಗೂಡೊಳಗಿನ ಗುಬ್ಬಿಯು
ಇಣುಕಿ ನೋಡುವ ನೋಟವ
ನೋಡಿದ ಕ್ಷಣವೇ
ಗೋಚರಿಸುವುದು ಪ್ರೇಮ|

ಅಂತರಂಗದ ಅಲೆಯು
ಅಮೃತದ ಅಲೆಯ ಮೇಲೆ
ಅಲೆಯುವಾಗ ಅನುಭವಿಸುವ
ಅನುಭವವೇ ಪ್ರೇಮ|

– ಅಮಿತ ಪಾಟೀಲ, ಆಲಗೂರ